ಬೆಳಗಾವಿ ಇಂದಿನ ಯುವ ಜನತೆ ಮಾದಕ ವಸ್ತುಗಳನ್ನು ದೂರವಿಟ್ಟು, ಆರೋಗ್ಯಕರ ಜೀವನವನ್ನು ನಡೆಸುವ ಮೂಲಕ ತಮ್ಮ ಕುಟುಂಬ ಮತ್ತು ದೇಶ ರಕ್ಷಣೆಗೆ ಮುಂದಾಗಬೇಕು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಯುವ ಸಮುದಾಯಕ್ಕೆ ಕರೆ ನೀಡಿದರು.
ಪೋಲಿಸ್ ಇಲಾಖೆ ವತಿಯಿಂದ ನಗರದ ಸಂಗೋಳ್ಳಿ ರಾಯಣ್ಣ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ಮಂಗಳವಾರ ಜರುಗಿದ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ “ಬೇಡ ಬ್ರೋ” ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಮಾದಕ ವಸ್ತುಗಳು ಯುವ ಜನಾಂಗವನ್ನು ಕಟ್ಟಿ ಹಾಕುವುದರ ಮೂಲಕ ಅವರ ಜೀವನವನ್ನೇ ಸರ್ವ ನಾಶ ಮಾಡುತ್ತಿದ್ದು, ಇವುಗಳ ನಿಯಂತ್ರಣ ದೇಶಕ್ಕೆ ದೊಡ್ಡ ಸವಾಲಾಗಿದೆ. ಮಾದಕ ವಸ್ತುಗಳ ಮಾರಾಟ ನಿಯಂತ್ರಣಕ್ಕೆ ಸರಕಾರಗಳು ಸಾಕಷ್ಟು ಪ್ರಯತ್ನಿಸುತ್ತಿದ್ದರು ಕೂಡ ಬೇರೆ ಬೇರೆ ಮೂಲಗಳ ಮೂಲಕ ದೇಶದ ಒಳಗೆ ಸಾಗಾಣಿಕೆಯಾಗುತ್ತಿದೆ ಎಂದರು.
ಯುವ ಜನತೆ ದೇಶದ ಆಸ್ತಿಯಾಗಿದ್ದು, ಮಾದಕ ವಸ್ತುಗಳಿಗೆ ಮಾರು ಹೋಗಬಾರದು. ಇವುಗಳಿಂದ ದೂರವಿರುವ ಇಚ್ಛಾಶಕ್ತಿಯನ್ನು ಹೊಂದಬೇಕು. ಧೃಡ ನಿರ್ಧಾರ, ಇಚ್ಛಾಶಕ್ತಿಯಿಂದ ಎಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ. ಮಾದಕ ವಸ್ತುಗಳು ಯಾವುದೇ ಸಂಘರ್ಷಗಳಿಲ್ಲದೇ ದೇಶದ ಆರ್ಥಿಕ ಪರಿಸ್ಥಿತಿಯನ್ನು ನಾಶಪಡಿಸುವ ಶಕ್ತಿ ಹೊಂದಿದೆ.
ಯುವಕರು ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲ ಆರೋಗ್ಯವಂತ ಹಾಗೂ ವ್ಯಸನಮುಕ್ತ ಸಮಾಜ ನಿರ್ಮಿಸಲು ಸಾಧ್ಯ. ಯುವಜನತೆ ಮಾದಕ ವಸ್ತುಗಳ ವ್ಯಸನದಿಂದ ದೂರವಿದ್ದು, ಶಿಕ್ಷಣ, ಶಿಸ್ತು ಹಾಗೂ ಒಳ್ಳೆಯ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು.
ಯುವಜನತೆ ಕ್ಷಣಿಕ ಆಕರ್ಷಣೆಗೆ ಒಳಗಾಗದೆ ತಮ್ಮ ಗುರಿಗಳತ್ತ ಗಮಹರಿಸಬೇಕು. ಸಮಾಜದಿಂದ ಮಾದಕ ವಸ್ತುಗಳ ಪಿಡುಗನ್ನು ನಿರ್ಮೂಲನೆ ಮಾಡಲು ಪೋಲಿಸ್ ಇಲಾಖೆ, ಶಿಕ್ಷಣ ಸಂಸ್ಥೆಗಳು, ಪೋಷಕರು ಹಆಗೂ ಸಾರ್ವಜನಿಕರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಸಚಿವರಾದ ಸತೀಶ್ ಜಾರಕಿಹೊಳಿ ಅವರು ಕರೆ ನೀಡಿದರು.
ಶಾಸಕರಾದ ರಾಜು(ಆಸೀಫ್) ಸೇಠ ಅವರು ಮಾತನಾಡಿ, ಯುವ ಜನತೆ ಉತ್ತಮ ಜೀವನ ರೂಪಿಸಿಕೊಳ್ಳಬೇಕಾದರೆ ಕಠಿಮ ಶ್ರಮ ಅಗತ್ಯ ಉನ್ನತ ವ್ಯಾಸಂಗಕ್ಕಾಗಿ ನಗರಗಳಿಗೆ ಆಗಮಿಸುವಂತಹ ವಿದ್ಯಾರ್ಥಿಗಳು ಮಾದಕ ವಸ್ತುಗಳಿಂದ ದೂರವಿದ್ದಲ್ಲಿ ಮಾತ್ರ ಜೀವನದಲ್ಲಿ ಗುರಿ ಸೇರಲು ಸಾಧ್ಯ. ಮಾದಕವಸ್ತುಗಳ ಸೇವನೆಯಿಂದ ಇಡೀ ಕುಟುಂಬವೇ ಬೀದಿಪಾಲಾದ ಅನೇಕ ಉದಾಹರಣೆಗಳನ್ನು ನಾವು ಕಾಣಬಹುದಾಗಿದೆ. ಯಾರು ಎಷ್ಟೆ ಒತ್ತಡ ಹಾಕಿದರು ಕೂಡ ಮಾದಕ ವಸ್ತುಗಳ ಸೇವನೆ ಮಾಡದಂತೆ ನಮ್ಮ ಮನಸ್ಸನ್ನು ಹಿಡತದಲ್ಲಿಟ್ಟುಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, “ಮಾದಕ ವಸ್ತುಗಳ ಸೇವನೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಇಂದು ಕೆಲ ಯುವಜನತೆ ಯಾರ ಹೆದರಿಕೆಯೂ ಇಲ್ಲದೆ ಮಾದಕ ವ್ಯಸನಗಳ ಸೇವನೆ ಮಾಡುತ್ತಿರುವುದು ದುರದೃಷ್ಟಕರವಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
ಮಾದಕ ವಸ್ತುಗಳ ಸೇವನಗಳ ದುಷ್ಪರಿಣಾಮಗಳ ಕುರಿತು ಭಯ ಹುಟ್ಟಿಸಬೇಕು. ಇಂದಿನ ಯುವಜನತೆ ಗಟ್ಟಿಯಾಗಿ ಈ ಕುರಿತು ಹೊರಾಡಲು ಕರೆ ನೀಡಿದ ಅವರು “ಯುವ ಹೈ ಭಾರತ ಕೆ ಪೆಹೆಚಾನ ಇನ್ಸೇಹಿ ಬಡೇ ದೇಶಕೆ ಸಮ್ಮಾನ್, ನಶೇಸೆ ಖುದ್ದಕೋ ದೂರ ಕರೋ ಯಹಿ ಹೇ ಜೀವನ ಮೇ ಸರ್ವ ಶ್ರೇಷ್ಠ ಸಮ್ಮಾನ” ಶಾಯರಿ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮೂಲಕ ಜಾಗೃತಿ ಮೂಡಿಸಿದರು.
ಪೋಲಿಸ್ ಆಯುಕ್ತರಾದ ಭೊರಸೆ ಗುಲಾಬರಾವ್ ಭೂಷಣ ಅವರು ಮಾತನಾಡಿ, ಜುಲೈ 1 ರಂದು ಮುಖ್ಯಮಂತ್ರಿಗಳು ಡ್ರಗ್ಸ್ ಮುಕ್ತ ಅಭಿಯಾನಕ್ಕೆ ಚಾಲನೆ ನೀಡಿದ್ದು, ಅದೇ ರೀತಿ ಜಿಲ್ಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ಕಾರ್ಯಕ್ರಮಕ್ರಮ ಆಯೋಜಿಸಲಾಗುವುದು. ದೇಶದಲ್ಲಿ ಇಂದು ಸಾಕಷ್ಟು ಜನ ಮಾದಕ ವಸ್ತುಗಳ ದಾಸರಾಗಿದ್ದು ಅದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನತೆ ಇರುವುದು ಕಳವಳಕರಿಯಾದಂತಹ ಸಂಗತಿಯಾಗಿದೆ.
ಮಾದಕ ವಸ್ತುಗಳ ಬಳಕೆ ದೇಶದ ಅಭಿವೃದ್ಧಿಗೆ ಮಾರಕವಾಗಿದ್ದು, ದೇಶದ ಯುವಜನತೆ ಮಾದಕ ವಸ್ತುಗಳಿಂದ ದೂರವಿದ್ದಲ್ಲಿ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಕಳೆದ ವರ್ಷ ಮಾದಕ ವಸ್ತುಗಳ ಕುರಿತು 49 ಪ್ರಕರಣ ದಾಖಲಿಸಿ 35ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಯುವಕರು ಮಾದಕ ವಸ್ತುಗಳಿಂದ ದೂರವಿದ್ದು, ಯಾರಾದರೂ ಮಾದಕ ವಸ್ತುಗಳ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಲ್ಲಿ ಕೂಡಲೆ ಮಾಹಿತಿ ನೀಡುವಂತೆ ಪೊಲೀಸ್ ಆಯುಕ್ತ ಭೋರಸೆ ತಿಳಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ, ದೇಶದ ಯುವ ಜನತೆಯನ್ನು ಮಾದಕ ವಸ್ತುಗಳ ವ್ಯಸನಿಗಳನ್ನಾಗಿಸುವ ಮೂಲಕ ದೇಶವನ್ನು ನಾಶಪಡಿಸಲು ಶತ್ರು ರಾಷ್ಟ್ರಗಳು ಹೊಸ ತಂತ್ರವನ್ನು ಅಳವಡಿಸಿಕೊಳ್ಳುತ್ತಿವೆ. ಅದರಲ್ಲೂ ಉನ್ನತ ವ್ಯಾಸಂಗ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟದಿಂದ ಬರುವಂತಹ ಹಣದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಅವುಗಳಿಂದ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಿದ್ದಾರೆ.
ದೇಶವನ್ನು ಕಟ್ಟುವಲ್ಲಿ ಯುವಜನತೆಯ ಪಾತ್ರ ಅತೀ ಪ್ರಮುಖವಾಗಿದೆ. ಯುವ ಜನತೆ ಮಾದಕ ವಸ್ತುಗಳಿಂದ ದೂರವಿದ್ದು ಇವುಗಳ ನಿಯಂತ್ರಣಕ್ಕೆ ಪೋಲಿಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಈ ಕಾರ್ಯದಲ್ಲಿ ಪ್ರತಿಯೊಬ್ಬರು ಜವಾಬ್ದಾರರು. ಯಾರೇ ಕೂಡ ಮಾದಕ ವಸ್ತುಗಳಿಗೆ ದಾಸರಾಗಿದ್ದರೆ, ಮಾರಾಟ ಮಾಡುವುದು ಕಂಡುಬಂದಲ್ಲಿ ಅಂತಹ ಮಾಹಿತಿಯನ್ನು ಪೋಲಿಸ್ ಇಲಾಖೆಗೆ ಮಾಹಿತಿ ನೀಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿ ಐ.ಎ.ಎಸ್. ಅಧಿಕಾರಿ ರೋಹಿತ್ ಸಿಂಗ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ತ್ಯಾಗರಾಜ್, ಕುಲಸಚಿವರಾದ ಸಂತೋಷ ಕಾಮಗೌಡ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳು, ಕಾಲೇಜಿನ ಬೋಧಕ, ಬೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ “ಬೇಡ್ ಬ್ರೋ” ಹಾಗೂ “ರೈಸ್” ಅಭಿಯಾನದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು.



