ಧಾರವಾಡ ಎಸ್‍ಐಆರ್ ಪ್ರಕ್ರಿಯೇ ಶೀಘ್ರದಲ್ಲಿಯೇ ಪೂರ್ಣಗೊಳಿಸಿ: ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್

WhatsApp Group Join Now

ಧಾರವಾಡ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿಯಾದ ವಿ.ಅನ್ಬುಕುಮಾರ್ ಅವರು ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿ, ಗಣತಿ ನಮೂನೆಗಳನ್ನು (Enumeration Forms) ವಿತರಣೆ ಮಾಡುವ ಹಾಗೂ ಗಣಕೀಕರಣದ ಕುರಿತು ಪ್ರಗತಿ ಪರಿಶೀಲನೆ ಮಾಡಿ, ಮಾತನಾಡಿದರು.

ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲೆಯ ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‍ಒ) ಮತದಾರರ ಮನೆ-ಮನೆಗಳಿಗೆ ಭೇಟಿ ನೀಡಿ, ಗಣತಿ ನಮೂನೆಗಳನ್ನು (Enumeration Forms) ವಿತರಣೆ ಮಾಡುವ ಹಾಗೂ ಗಣಕೀಕರಣದ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿಯೇ ಶೇ. 100 ರಷ್ಟು ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನಮೂನೆಗಳು ತಲುಪಬೇಕು. ಯಾವುದೇ ಅರ್ಹ ವ್ಯಕ್ತಿಯು ಮತಪಟ್ಟಿಯಿಂದ ಬಿಟ್ಟು ಹೋಗದಂತೆ ಕ್ರಮ ವಹಿಸಬೇಕು ಎಂದು ಹೇಳಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಕಾಲದಲ್ಲಿ ನೀಡಬೇಕು. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು ಎಂದರು.

ಪರಿಷ್ಕರಣೆ ಕಾರ್ಯದ ಪ್ರಗತಿ ಹಾಗೂ ಎದುರಾಗುವ ಸಮಸ್ಯೆಗಳ ಕುರಿತು ವಾರಕ್ಕೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಸಭೆಯಲ್ಲಿ ಪಡೆದ ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ದಾಖಲಿಸಿಕೊಂಡು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಈಗಾಗಲೇ ಜಿಲ್ಲೆಯ ಎಲ್ಲ ಬಿಎಲ್‍ಓ ಅವರು ಎಎಸ್‍ಡಿಡಿ ಯಾದಿಗಳನ್ನು ತಯಾರಿಸಿ, ಸಂಬಂಧಿಸಿದ ಮತಗಟ್ಟೆಗಳ ಬಿಎಲ್‍ಎ ಅವರಿಗೆ ನೀಡಿ, ಸದರಿ ಯಾದಿಗಳನ್ನು ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಪರಿಶೀಲಿಸಲು ತಿಳಿಸಿದರು.

ಸ್ಥಳಾಂತರಗೊಂಡ ಮತದಾರರ ಯಾದಿಯಲ್ಲಿರುವ ಯಾವುದೇ ಮತದಾರರು ಪುನಃ ಅವರ ವಾಸಸ್ಥಳದಲ್ಲಿರುವುದು ಕಂಡುಬಂದಲ್ಲಿ, ಅಂತಹ ಮತದಾರರ ವಿವರಗಳನ್ನು ಎಎಸ್‍ಡಿಡಿ ಯಾದಿಯಿಂದ ಹಿಂಪಡೆದು ನಿಯಮಾನುಸಾರ ಮುಂದಿನ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.

ಸ್ಥಳಾಂತರ ಮತದಾರರ ಯಾದಿಯಲ್ಲಿರುವ ಮತದಾರರು ಯಾವುದೇ ಮಾಹಿತಿಗಾಗಿ ಸಂಬಂಧಪಟ್ಟ ಮತಗಟ್ಟೆಯ ಬಿಎಲ್‍ಓ, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತದಾರರ ನೋಂದಣಾಧಿಕಾರಿಗಳಿಗೆ ಸಂಪರ್ಕಿಸಬೇಕು ಎಂದು ಹೇಳಿದರು.

ಚುನಾವಣಾ ಆಯೋಗದ ಆದೇಶದಲ್ಲಿನ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ರೀತಿಯ ಲೋಪ ಅಥವಾ ತಪ್ಪುಗಳಿಗೆ ಅವಕಾಶ ನೀಡದೆ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

69-ನವಲಗುಂದ ವಿಧಾನಸಭಾ ಕ್ಷೇತ್ರ, 70-ಕುಂದಗೋಳ ವಿಧಾನಸಭಾ ಕ್ಷೇತ್ರ, 71-ಧಾರವಾಡ ವಿಧಾನಸಭಾ ಕ್ಷೇತ್ರ, 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ಹಾಗೂ 75-ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 100 ರಷ್ಟು ಗಣತಿ ನಮೂನೆಗಳನ್ನು ವಿತರಿಸಲಾಗಿದೆ.

73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರ ಹಾಗೂ 74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ 33,510 ಗಣತಿ ನಮೂನೆ ವಿತರಣೆ ಕಾರ್ಯ ಬಾಕಿ ಇದ್ದು, ಆದಷ್ಟು ಬೇಗನೆ ವಿತರಣೆ ಕಾರ್ಯ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಧಾರವಾಡ ಜಿಲ್ಲೆಯಲ್ಲಿ ಶೇ. 57.99 ರಷ್ಟು ಗಣತಿ ನಮೂನೆಗಳು ಗಣಕೀಕೃತಗೊಂಡಿದ್ದು, ಅದರಲ್ಲಿ 69-ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಶೇ. 86.56 ರಷ್ಟು, 70-ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 69.91 ರಷ್ಟು, 71-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಶೇ. 56.74 ರಷ್ಟು, 72-ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಶೇ. 49.49 ರಷ್ಟು, 73-ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 42.09 ರಷ್ಟು, 74-ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಶೇ. 44.39 ರಷ್ಟು ಹಾಗೂ 75-ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 67 ರಷ್ಟು ಗಣತಿ ನಮೂನೆಗಳು ಗಣಕೀಕೃತಗೊಂಡಿವೆ. 5,64,408 ಗಣತಿ ನಮೂನೆಗಳನ್ನು ಎಲ್ಲ ಬಿಎಲ್‍ಓ ಗಳು ಶೀಘ್ರವೇ ಗಣಕೀಕೃತಗೊಳಿಸಿ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಪೆÇ್ರಬೆಷನರಿ ಐಎಎಸ್ ಅಧಿಕಾರಿ ಅನುಪ್ರೀಯಾ ಸಾಕ್ಯಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಪ್ರಭಾವತಿ ಪಕೀರಪುರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಾದ ಡಾ.ರುದ್ರೇಶ್ ಎಸ್. ಘಾಳಿ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಎಲ್ಲಾ ವಿಧಾನ ಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ಎಲ್ಲ ತಾಲೂಕಿನ ತಹಶೀಲ್ದಾರರು ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

About The Author