ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

WhatsApp Group Join Now

ಕುಣಿಗಲ್: ನೀಟ್ ಪರೀಕ್ಷೆ ಅಕ್ರಮ, ವಿದ್ಯಾರ್ಥಿಗಳ ಆತ್ಮಹತ್ಯೆಯ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ ಚುಕ್ ಅವರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿಯನ್ನು ಖಂಡಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಕಾರ್ಯಕರ್ತರು ಬಾಯಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೋಮವಾರ ಪಟ್ಟಣದಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದರು.

ವೇದಿಕೆ ರಾಜ್ಯ ಅಧ್ಯಕ್ಷ ಹೆಚ್.ಜಿ.ರಮೇಶ್ ಮಾತನಾಡಿ, ದೆಹಲಿಯ ಜಂತರ್ ಮಂತರ್‌ನಲ್ಲಿ ತಮ್ಮ ದೇಹವನ್ನು ದಂಡಿಸಿಕೊಂಡು, ಪ್ರಾಣವನ್ನು ಲೆಕ್ಕಿಸದೇ ಸಾಮಾಜಿಕ ಹೋರಾಟಗಾರ ವಿಜ್ಞಾನಿ ಸೋನಂ ವಾಂಗ್‌ಚುಕ್ ಅವರು ಕಳೆದ 20 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾಮಾಜಿಕ ಕಾಳಜಿ ಇಟ್ಟುಕೊಂಡು ಯಾರೆಲ್ಲಾ ಹೋರಾಟ ನಡೆಸುತ್ತಿದ್ದಾರೋ ಯಾರೆಲ್ಲಾ ಸತ್ಯ ಹೇಳುತ್ತಾರೋ ಅವರ ಬಾಯಿ ಮುಚ್ಚಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಸೋನಂ ವಾಂಗ್ ಚುಕ್ ಅವರು ಲಡಾಖ್ ನ ಪ್ರಸಿದ್ಧ ಇಂಜಿನಿಯರ್, ನವೋದ್ಯಮಿ, ಶಿಕ್ಷಣ ಸುಧಾರಕ ಹಾಗೂ ಪರಿಸರವಾದಿಯಾಗಿದ್ದಾರೆ. ಅವರು 1988 ರಲ್ಲಿ ಸ್ಥಾಪಿಸಲಾದ ಎಸ್ ಇಸಿಎಂಒಎಲ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ದೇಶದ ಸೈನಿಕರಿಗೆ ಸೋಲಾ‌ರ್ ಟೆಂಟ್ ಗಳನ್ನು ನಿರ್ಮಾಣ ಮಾಡಿಕೊಟ್ಟ ಮೊದಲಿಗರಾಗಿದ್ದಾರೆ. ಅಂತಹವರಿಗೆ ದೇಶ ವಿರೋಧಿ ಪಟ್ಟವನ್ನು ಕಟ್ಟಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಅವರು ಟೀಕಿಸಿದರು.

ವೇದಿಕೆ ಶಿವಮೊಗ್ಗ ಜಿಲ್ಲಾಧ್ಯಕ್ಷ ಸಿ. ಮೂರ್ತಿ ಮಾತನಾಡಿ, ನೀಟ್ ಪರೀಕ್ಷೆ ಸಂಬಂಧಿಸಿದ ಎಲ್ಲಾ ಅಕ್ರಮ ಕುರಿತು ಸಂಪೂರ್ಣ ಪಾರದರ್ಶಕತೆ ನಿಷ್ಪಕ್ಷಪಾತ ತನಿಖೆ ಆಗಬೇಕು. ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು. ಭ್ರಷ್ಟಾಚಾರ ವಿರೋಧಿ, ರೈತ ಪರ ಸಾರ್ವಜನಿಕ ಹಿತಾಸಕ್ತಿಯ ಹೋರಾಟದಲ್ಲಿ ಭಾಗವಹಿಸುವ ನಾಗರಿಕರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹ ಪಡಿಸಿದರು. ಇದೇ ವೇಳೆ ಉಪತಹಶೀಲ್ದಾರ್ ರವೀಂದ್ರ ಅವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ಶಿವಮೊಗ್ಗ ಜಿಲ್ಲೆಯ ವೆಂಕಟೇಶ್, ಪ್ರಭಾಕ‌ರ್ ಹೊಸಬಾಳೆ, ದಿನೇಶ್, ಗೀತಾ, ಗಾಯತ್ರಿ, ಹೆಚ್.ಡಿ.ಕೃಷ್ಣ, ದಿವಾಕರ್, ಲಕ್ಷ್ಮಿ ಹಾಗೂ ಹೇಮಂತ್‌ಕುಮಾ‌ರ್, ದೀಪಕ್, ಹೆಚ್.ಸಿ.ರವಿಚಂದ್ರ, ನರಸೇಗೌಡ, ರಾಜು, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.

About The Author