ರೋಣ ಸರ್ಕಾರಿ ಮಾದರಿ ಶಾಲೆಯ ನಿವೃತ್ತ ಶಿಕ್ಷಕರಿಗೆ ಮಾಜಿ ವಿದ್ಯಾರ್ಥಿಗಳಿಂದ ನೆನಪಿನ ಗೌರವ

WhatsApp Group Join Now

​ಗದಗ ಜಿಲ್ಲೆಯ ರೋಣ ಪಟ್ಟಣದ ಎಸ್. ಆರ್. ಪಾಟೀಲ್ ಬಾಲಕರ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ೨೦೧೭-೧೮ನೇ ಸಾಲಿನ ೭ನೇ ತರಗತಿಯ ಮಾಜಿ ವಿದ್ಯಾರ್ಥಿಗಳು ತಮಗೆ ಜ್ಞಾನ ಧಾರೆ ಎರೆದ ನಿವೃತ್ತ ಶಿಕ್ಷಕರಿಗಾಗಿ ಇತ್ತೀಚೆಗೆ ವಿಶೇಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡು ಗುರುವಂದನೆ ಸಲ್ಲಿಸಿದರು.
​ಕಾರ್ಯಕ್ರಮದ ಆರಂಭದಲ್ಲಿ ಉಪಸ್ಥಿತರಿದ್ದ ನಿವೃತ್ತ ಶಿಕ್ಷಕರು ಗಿಡಕ್ಕೆ ನೀರೆರೆಯುವ ಮೂಲಕ ಅರ್ಥಪೂರ್ಣವಾಗಿ ಉದ್ಘಾಟನೆ ನೆರವೇರಿಸಿದರು. ನಂತರ ಶಾಲೆಯ ನಿವೃತ್ತ ಶಿಕ್ಷಕರಾದ ಬಿ. ಪಿ. ಅತ್ತಿಗೇರಿ, ಜೆ. ಎಸ್. ನೀಲಗಾರ, ಎಸ್. ಎಚ್. ನೀಲಗಾರ, ಎಲ್. ಡಿ. ಕಾಳೆ, ಎನ್. ವಿ. ನಡುಲಿನಮನಿ, ಎಸ್. ಎಂ. ಸೋಮಣ್ಣವರ, ಪಿ. ಡಿ. ಪಾಟೀಲ, ಕೆ. ಎಸ್. ಬಾರಕೇರ, ಎಸ್. ವೈ. ಕುರಹಟ್ಟಿ ಹಾಗೂ ವಿ. ಬಿ. ಕುದರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಲಾಯಿತು.
​ವಿದ್ಯಾರ್ಥಿಗಳ ಅನಿಸಿಕೆ ಹಾಗೂ ನೆನಪಿನ ಬಂಡಾರ:
ಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ಮಧುರ ನೆನಪುಗಳನ್ನು ಹಂಚಿಕೊಂಡರು. ಹಳೆ ವಿದ್ಯಾರ್ಥಿ ವಿನೋದ್ ಜಿಡ್ಡಿಬಾಗಿಲು ಮಾತನಾಡಿ, “ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ಕನ್ನಡ, ಗಣಿತ ಹಾಗೂ ಹಿಂದಿ ಸೇರಿದಂತೆ ಎಲ್ಲಾ ವಿಷಯಗಳನ್ನು ನಮ್ಮ ಶಿಕ್ಷಕರು ಅತ್ಯಂತ ಮುತವರ್ಜಿಯಿಂದ ಕಲಿಸಿಕೊಟ್ಟರು. ಅವರು ನೀಡಿದ ಶಿಸ್ತು ಮತ್ತು ಮೌಲ್ಯಯುತ ಶಿಕ್ಷಣದ ಪರಿಣಾಮವಾಗಿ ಇಂದು ನಾವೆಲ್ಲರೂ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲು ಸಾಧ್ಯವಾಗಿದೆ” ಎಂದು ಗದ್ಗದಿತರಾಗಿ ನುಡಿದರು.
​ಮತ್ತೋರ್ವ ಮಾಜಿ ವಿದ್ಯಾರ್ಥಿ ಮಾತನಾಡಿ, “ಸರ್ಕಾರಿ ಶಾಲೆಯಲ್ಲಿ ಕಲಿತ ನಮಗೆ ನಮ್ಮ ಗುರುಗಳು ಕೇವಲ ಪಾಠ ಹೇಳಿಕೊಡಲಿಲ್ಲ, ಬದುಕಿನ ಹಾದಿಯನ್ನೂ ತೋರಿಸಿದರು. ವರ್ಷಗಳು ಕಳೆದರೂ ನಮ್ಮ ಮೇಲಿರುವ ಅವರ ಪ್ರೀತಿ-ವಾತ್ಸಲ್ಯ ಕಡಿಮೆಯಾಗಿಲ್ಲ. ಅಂತಹ ಮಹಾನ್ ಚೇತನಗಳನ್ನು ಒಂದೆಡೆ ಸೇರಿಸಿ ಗೌರವಿಸುವ ಅವಕಾಶ ಸಿಕ್ಕಿದ್ದು ನಮ್ಮ ಭಾಗ್ಯ” ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡರು.
​ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ತೋರಿದ ಈ ಪ್ರೀತಿ, ಗೌರವ ಹಾಗೂ ಕೃತಜ್ಞತಾ ಭಾವನೆಯನ್ನು ಕಂಡು ಭಾವುಕರಾಗಿ, ಮಾಜಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಸಿದರು.
​ಈ ವಿಶೇಷ ಗೌರವ ಸಮಾರಂಭದಲ್ಲಿ ಮಾಜಿ ವಿದ್ಯಾರ್ಥಿಗಳಾದ ಸಲೀಮ್ ಇದ್ದಲ್ಲಿ, ನಾಗರಾಜ್ ಪೂಜಾರ್, ಸಾಗರ್ ಬಡಿಗೇರ್, ಮಂಜುನಾಥ ಐಹೊಳೆ, ಗೋವಿಂದ್ ಪೂಜಾರ, ಮೈಲಾರಪ್ಪ ಕೊರವಾರ, ಮಲ್ಲಪ್ಪ ಹಿರೇಮನಿ, ಪರಶುರಾಮ್ ಹಲಗಿ, ರವಿ ಜಡಿ, ಮಣಿಕಂಠ ಬಂಡಿಗೇರಿ, ಅಭಿಷೇಕ್ ಲಾಠಿ ಸೇರಿದಂತೆ ಅನೇಕ ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

About The Author