ಸಾಮಾನ್ಯವಾಗಿ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸಚಿವರು, ಶಾಸಕರು ಹಾಗೂ ಗಣ್ಯರು ಆಗಮಿಸಿದಾಗ, ತಮ್ಮ ಭಾಷಣ ಮುಗಿಸಿ ಮತ್ತೊಂದು ಕಾರ್ಯಕ್ರಮ ಅಥವಾ ತುರ್ತು ಕೆಲಸದ ನೆಪದಲ್ಲಿ ಕಾರ್ಯಕ್ರಮ ಪೂರ್ಣಗೊಳ್ಳುವ ಮುನ್ನವೇ ನಿರ್ಗಮಿಸುವುದು ಕಂಡುಬರುತ್ತದೆ. ಆದರೆ ‘ಜಾಣಗೆರೆ–75’ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರು ಇದಕ್ಕೆ ತದ್ವಿರುದ್ಧವಾದ ನಡೆ ತೋರುವ ಮೂಲಕ ಗಮನ ಸೆಳೆದರು.
ಜಾಣಗೆರೆ ವೆಂಕಟರಾಮಯ್ಯ ಹಾಗೂ ಅವರ ಧರ್ಮಪತ್ನಿಯನ್ನು ಸನ್ಮಾನಿಸಿದ ಬಳಿಕ ಸಲೀಂ ಅಹ್ಮದ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಕಾರ್ಯಕ್ರಮದಿಂದ ನಿರ್ಗಮಿಸಲಿದ್ದಾರೆ ಎಂದೇ ಅಲ್ಲಿದ್ದವರು ಭಾವಿಸಿದ್ದರು. ಆದರೆ ಜಾಣಗೆರೆ ದಂಪತಿಗಳನ್ನು ಸನ್ಮಾನಿಸಿದ ಬಳಿಕ ನಡೆದ ಬೆಳವಣಿಗೆ ಅಲ್ಲಿ ನೆರೆದಿದ್ದವರ ಗಮನ ಸೆಳೆಯಿತು.
ನಿರೂಪಕರು ಸಭೆಯನ್ನುದ್ದೇಶಿಸಿ ಮಾತನಾಡುವಂತೆ ಸಲೀಂ ಅಹ್ಮದ್ ಅವರನ್ನು ಆಹ್ವಾನಿಸಿದಾಗ, ವೇದಿಕೆಯಲ್ಲಿದ್ದ 55ಕ್ಕೂ ಹೆಚ್ಚು ಸನ್ಮಾನಿತರತ್ತ ಕೈತೋರಿದ ಅವರು, ಮೊದಲು ಇವರ ಸನ್ಮಾನ ಪೂರ್ಣಗೊಳ್ಳಲಿ, ನಂತರ ಮಾತನಾಡುತ್ತೇನೆ ಎಂದು ತಿಳಿಸಿದರು.
ಇದಕ್ಕೆ ಕಾರಣವೂ ಅಷ್ಟೇ ವಿಶೇಷವಾಗಿತ್ತು. “ನನ್ನನ್ನು ಸನ್ಮಾನಿಸಿದ ಕೂಡಲೇ ಉಳಿದವರನ್ನೂ ಸನ್ಮಾನಿಸಬೇಕು ಎಂದು ಜಾಣಗೆರೆ ವೆಂಕಟರಾಮಯ್ಯ ಅವರು ಹೇಳಿದ್ದಾರೆ” ಎಂದು ಹೇಳಿದ ಸಲೀಂ ಅಹ್ಮದ್, ಕೇವಲ ಮಾತಿನಲ್ಲಿ ನಿಲ್ಲದೆ ಸ್ವತಃ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಒಬ್ಬೊಬ್ಬರನ್ನಾಗಿ ಸನ್ಮಾನಿತರನ್ನು ಗೌರವಿಸಿ, ಅವರೊಂದಿಗೆ ಆತ್ಮೀಯವಾಗಿ ಬೆರೆತರು.
ಸನ್ಮಾನ ಮುಗಿದ ಕೂಡಲೇ ಹೊರಡುವ ಬದಲು ಕಾರ್ಯಕ್ರಮದ ಕೊನೆಯವರೆಗೂ ವೇದಿಕೆಯಲ್ಲೇ ಉಪಸ್ಥಿತರಿದ್ದ ಸಲೀಂ ಅಹ್ಮದ್ ಅವರ ನಡೆ, ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಮೆಚ್ಚುಗೆಗೆ ಪಾತ್ರವಾಯಿತು. ಇದರೊಂದಿಗೆ ಕಾರ್ಯಕ್ರಮದ ಅಂತಿಮ ಹಂತದಲ್ಲಿಯೂ ಅವರು ಮತ್ತೊಂದು ವಿಶೇಷ ನಡೆ ತೋರಿದರು. ‘ಜಾಣಗೆರೆ–75’ ಕಾರ್ಯಕ್ರಮವನ್ನು ಆಯೋಜಿಸಿದವರು ಯಾರು ಎಂಬುದನ್ನು ಸ್ವತಃ ವಿಚಾರಿಸಿ ತಿಳಿದುಕೊಂಡ ಅವರು, ಕಾರ್ಯಕ್ರಮದ ಯಶಸ್ಸಿನ ಹಿಂದೆ ಶ್ರಮಿಸಿದ ಆಯೋಜಕರನ್ನೂ ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಅವರು ಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿಯಾಯಿತು.
ಭಿನ್ನ ವ್ಯಕ್ತಿತ್ವಕ್ಕೆ ಸಾಕ್ಷಿಯಾದ ಸಭಾಪತಿ!

WhatsApp Group
Join Now
