ಬೆಳಗಾವಿ ರಾಜ್ಯ ಸರ್ಕಾರವು ಪ್ರತಿಯೊಬ್ಬ ಪ್ರಜೆಯನ್ನು ತಲುಪಬೇಕು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಸರ್ಕಾರ ಸಿದ್ಧವಾಗಿದೆ ಎಂಬ ಸಂದೇಶವನ್ನು ಪ್ರತಿ ಮನೆ ಮನೆಗೆ ನೀಡಬೇಕು ಎನ್ನುವ ಆಶಯದೊಂದಿಗೆ ಪ್ರಜಾಸೇವಾ ಆಂದೋಲನ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಲೋಕೋಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಯರಗಟ್ಟಿಯ ಶ್ರೀಶೈಲ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಶನಿವಾರ ಜರುಗಿದ ಯರಗಟ್ಟಿ ಹಾಗೂ ಸವದತ್ತಿ ತಾಲೂಕಿನ ಪ್ರಜಾ ಸೇವೆ ಆಂದೋಲನ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರ್ಣಗೊಂಡಿದ್ದು, ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ತಪ್ಪಿಸುವ ಉದ್ದೇಶದಿಂದ ‘ಪ್ರಜಾ ಸೇವೆ’ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ರೀತಿಯ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.
ಕಳೆದ ಮೂರು ವರ್ಷಗಳಿಂದ ಸಾರ್ವಜನಿಕರೊಂದಿಗೆ ನಿರಂತರವಾಗಿ ಸಭೆ ನಡೆಸಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದ್ದರೂ ಅರ್ಜಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಸಾರ್ವಜನಿಕರು ತಮ್ಮ ಸಮಸ್ಯೆಗಳ ಅರ್ಜಿಗಳನ್ನು ಹಿಡಿದು ಕಚೇರಿಗಳ ಸುತ್ತಾಡುವುದನ್ನು ತಪ್ಪಿಸುವ ಉದ್ದೇಶದಿಂದ ಪ್ರತ್ಯೇಕ ವ್ಯವಸ್ಥೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸರ್ಕಾರದ ಪ್ರತಿಯೊಂದು ಯೋಜನೆಯ ಅನುಕೂಲತೆಯನ್ನು ಗ್ರಾಮದ ಪ್ರತಿಯೊಂದು
ಮನೆಗೆ ತಲುಪಿಸುವುದು, ಸಾರ್ವಜನಿಕರ ಅಹವಾಲು ಆಲಿಸಲೆಂದೇ ಪ್ರತ್ಯೇಕವಾಗಿ ಪ್ರಜಾ ಸೇವೆ ಇಲಾಖೆಯೊಂದನ್ನು ರಚನೆ ಮಾಡಿ ಸಾರ್ವಜನಿಕರ ಅಹವಾಲುಗಳನ್ನು ಗುಣಾತ್ಮಕ ರೀತಿಯಲ್ಲಿ ವಿಲೇವಾರಿ ಮಾಡುವುದು ಈ ಪ್ರಜಾಸೇವೆ ಆಂದೋಲನದ ವಿಶೇಷತೆಯಾಗಿದೆ ಎಂದು ತಿಳಿಸಿದರು.
ಜನರ ವೈಯಕ್ತಿಕ ಹಾಗೂ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಜಿಲ್ಲೆಯ ಪ್ರತಿಯೊಂದು ತಾಲ್ಲೂಕಿನಲ್ಲೂ ‘ಪ್ರಜಾ ಸೇವೆ’ ಆಂದೋಲನ ಕಾರ್ಯಕ್ರಮ ನಡೆಸಲಾಗುವುದು. ಅಧಿಕಾರಿಗಳು ಅರ್ಜಿಗಳನ್ನು ಕೇವಲ ಸ್ವೀಕರಿಸುವುದಕ್ಕೆ ಸೀಮಿತವಾಗದೆ, ಕಾನೂನು ಬದ್ಧವಾಗಿ ಸಾಧ್ಯವಿರುವ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ಸೂಚಿಸಿದರು.
ಶಾಸಕರಾದ ವಿಶ್ವಾಸ್ ವೈದ್ಯ ಅವರು ಮಾತನಾಡಿ, ಸಾರ್ವಜನಿಕರ ಮನೆ ಬಾಗಿಲಗೆ ಸರಕಾರದ ಆಡಳಿತವನ್ನು ತೆಗೆದುಕೊಂಡು ಹೋಗುವ ಉದ್ದೇಶದೊಂದಿಗೆ ಪ್ರಜಾ ಸೇವಾ ಅಂದೋಲನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸರಕಾರದ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮದಿಂದಾಗಿ ಸಾರ್ವಜನಿಕರ ತಮ್ಮ ಬಹು ದಿನಗಳ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಂದರು.
ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದರ ಮೂಲಕ ಸರಕಾರವು ನುಡಿದಂತೆ ನಡೆಯುತ್ತಿದ್ದು ಜಿಲ್ಲಾ ಉಸ್ತುವಾರಿ ಸಚಿವರ ಉಸ್ತುವಾರಿಯಲ್ಲಿ ಈ ಭಾಗದ ಅನೇಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಶಾಸಕರಾದ ವೈದ್ಯ ಅವರು ತಿಳಿಸಿದರು.
ಸಭೆಯಲ್ಲಿ ವಾ.ಕ.ರ.ಸಾರಿಗೆ ನಿಗಮದ ಉಪಾಧ್ಯಕ್ಷರಾದ ಸುನೀಲ ಹನುಮಣ್ಣವರ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಸಂಜಯ ಶೆಟ್ಟಣ್ಣವರ,
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಸೇರಿದಂತೆ ಜಿಲ್ಲಾ,ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.
ಸಭೆಯಲ್ಲಿ ಕೃಷಿ, ಹೆಸ್ಕಾಂ, ಕಾರ್ಮಿಕ ಇಲಾಖೆ, ನೀರಾವರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಸ್ವೀಕರಿಸಲಾಯಿತು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಫಲಾನುಭವಿ ಆಧಾರಿತ ವಿವಿಧ ಕಾರ್ಯಕ್ರಮಗಳಾದ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ವಿಶೇಷ ಘಟಕ/ ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ/ಮೇಕೆ ಘಟಕ ಅನುಷ್ಠಾನಕ್ಕಾಗಿ ರೂ.90,000/- ಸಾವಿರಗಳ ಸಹಾಯಧನದ ಚೆಕ್, ಅನುಗ್ರಹ ಯೋಜನೆಯಡಿಯಲ್ಲಿ ಆಕಸ್ಮಿಕವಾಗಿ ಮರಣಹೊಂದಿದ ದೊಡ್ಡ ಜಾನುವಾರುಗಳ ಮಾಲಿಕರಿಗೆ ನೀಡಲಾಗುವ ಪರಿಹಾರ ಯೋಜನೆಯಡಿಯಲ್ಲಿ ಈ ಕೆಳಕಂಡ ಜಾನುವಾರು ಮಾಲಿಕರಿಗೆ ತಲಾ ರೂ.15,000/- ಸಾವಿರಗಳ ಪರಿಹಾರದ ಚೆಕ್, ರೈತರಿಗೆ ಮೇವಿನ ಕಿಟ್,
ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ, ಪಶುಸಖಿಯರಿಗೆ ಪಶುಸಖಿ ಕಿಟ್ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕಿಟಗಳನ್ನು, ಕಂದಾಯ ಇಲಾಖೆ ವತಿಯಿಂದ ಸಾಮಾಜಿಕ ಭದ್ರತೆ ಯೋಜನೆಯಡಿಯ ವಿವಿಧ ಪಿಂಚಣಿ ಆದೇಶ ಪ್ರತಿಗಳನ್ನು ಫಲಾನುಭವಿಗಳಿಗೆ ಸಾಂಕೇತಿಕವಾಗಿ ವಿತರಿಸಿದರು.
ಕಾರ್ಮಿಕರ ಕಲ್ಯಾಣ ಇಲಾಖೆಗೆ
ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಗ್ರಾಮದ 9ಎಕರೆ 30 ಗುಂಟೆ ಸರಕಾರಿ ಜಾಗವನ್ನು ಕರ್ನಾಟಕ ಕಟ್ಟಡ ಹಾಗೂ ಇತರೆ ನಿರ್ಮಾಣ, ಸುಮಾರು 36 ಕೋಟಿಗಳಲ್ಲಿ ವಸತಿ ಶಾಲೆ, ಕ್ರೀಡಾಂಗಣ ಹಾಗೂ ಹಲವಾರು ಕಟ್ಟಡ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕು ಪತ್ರ, ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಗ್ರಾಮದ 3ಎಕರೆ 36ಗುಂಟೆ ಜಾಗವನ್ನು ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕು ಪತ್ರವನ್ನು ಶಿಕ್ಷಣ ಇಲಾಖೆಗೆ ಹಾಗೂ ಯರಗಟ್ಟಿ ತಾಲೂಕಿನ ಕುರುಬಗಟ್ಟಿ ಗ್ರಾಮದ 12 ಎಕರೆ 12ಗುಂಟೆ ಪೈಕಿ 2 ಎಕರೆ ಜಮೀನನ್ನು ತಾವಗೇರಿ ಗ್ರಾಮದ ಹೊಳೆವ ಜನಾಂಗದವರಿಗೆ ಮನೆ ಕಟ್ಟಡ ಅಥವಾ ನಿವೇಶನ ನಿರ್ಮಾಣಕ್ಕಾಗಿ ಮಂಜೂರಾದ ಜಮೀನಿನ ಹಕ್ಕು ಪತ್ರಗಳನ್ನು ಆಯಾ ಇಲಾಖೆಗಳಿಗೆ ಹಸ್ತಾಂತರಿಸಿದರು.



