ಬೆಂಗಳೂರು: ಸಾಮಾಜಿಕ ಸೇವೆ, ಕನ್ನಡ ನಾಡು-ನುಡಿಯ ಅಭಿಮಾನ ಹಾಗೂ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರಾಮದುರ್ಗ ಪಟ್ಟಣದ ಎಂ. ಕೆ. ಯಾದವಾಡ ಅವರಿಗೆ ಪ್ರತಿಷ್ಠಿತ “ವಿಶ್ವ ಕನ್ನಡ ರತ್ನ” ಪ್ರಶಸ್ತಿ” ಲಭಿಸಿದೆ.
ಇದೇ ನವೆಂಬರ್ 14 ರಂದು ಬೆಂಗಳೂರಿನಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಯುನೈಟೆಡ್ ಇಂಟರ್ನ್ಯಾಷನಲ್ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ ಕೆ ಯಾದವಾಡ ಅವರಿಗೆ ವಿಶ್ವ ಕನ್ನಡ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಎಂ. ಕೆ. ಯಾದವಾಡ ರವರು ಹಲವು ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಮೂಲಕ ಜನಪರ ಕಾಳಜಿಯನ್ನು ಮೆರೆದಿದ್ದಾರೆ. ವಿಶೇಷವಾಗಿ ರಾಮದುರ್ಗ ತಾಲೂಕಿನ ಬಹುದಿನಗಳ ಕನಸಾಗಿರುವ ಲೋಕಾಪುರ–ರಾಮದುರ್ಗ–ಸವದತ್ತಿ ಯಲ್ಲಮ್ಮ ಮಾರ್ಗವಾಗಿ ಧಾರವಾಡದವರೆಗೆ ಹೊಸ ರೈಲು ಮಾರ್ಗ ನಿರ್ಮಾಣವಾಗಬೇಕೆಂಬ ಮಹತ್ವಾಕಾಂಕ್ಷೆಯ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ರಾಮದುರ್ಗ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಸಂಘಟಿಸುವುದು, ರೈಲ್ವೆ ಯೋಜನೆಯ ಅಗತ್ಯತೆಯನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವುದು ಮತ್ತು ರೈಲ್ವೆ ಮಾರ್ಗದ ಅನುಷ್ಠಾನಕ್ಕಾಗಿ ಹೋರಾಟಕ್ಕೆ ಬಲ ತುಂಬುವ ಕಾರ್ಯದಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಎಂ ಕೆ ಯಾದವಾಡ ರವರಿಗೆ ಬಂಧು-ಮಿತ್ರರು, ಮುಖಂಡರು, ಹಿತೈಷಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.



