ಯಾರಾದರೂ ಪೊಲೀಸ್ ಠಾಣೆಗೆ ಹೋದಾಗ ಇಲ್ಲವೇ ಅಧಿಕಾರಿಗಳನ್ನು ಭೇಟಿ ಮಾಡುವಾಗ, “ಮೊಬೈಲ್ ಸ್ವಿಚ್ ಆಫ್ ಮಾಡಿ” ಇಲ್ಲವೇ “ಮೊಬೈಲ್ ಹೊರಗೆ ಇಟ್ಟು ಬನ್ನಿ” ಎಂದು ಹೇಳುವುದನ್ನು ಕೇಳಿರಬಹುದು. ಆದರೆ, ಹೀಗೆ ತಡೆಯಲು ಅವರಿಗೆ ಅಧಿಕಾರವಿದೆಯೇ? ಆರ್‌ಟಿಐ (RTI) ಅಡಿಯಲ್ಲಿ ಬಹಿರಂಗವಾದ ದಿಟ ಇಲ್ಲಿದೆ.
ಮಾಹಿತಿ ಹಕ್ಕು ಅರ್ಜಿಗೆ, ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ (DG & IGP) ಕಚೇರಿಯೇ ಅಧಿಕೃತವಾಗಿ ಬದಲು ನೀಡಿದೆ. “ಸಾರ್ವಜನಿಕರು ಪೊಲೀಸ್ ಅಧಿಕಾರಿಗಳ ಕಚೇರಿ ಒಳಗಡೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಿ ಇಲ್ಲವೇ ತೆಗೆದುಕೊಂಡು ಹೋಗುವ ಬಗ್ಗೆ, ಮಹಾನಿರ್ದೇಶಕರ ಕಚೇರಿಯಿಂದ ಯಾವುದೇ ಆದೇಶ, ಮಾರ್ಗದರ್ಶನ ಇಲ್ಲವೇ ಸುತ್ತೋಲೆಗಳನ್ನು ಹೊರಡಿಸಿರುವ ಬಗ್ಗೆ ಮಾಹಿತಿ ಲಭ್ಯವಿರುವುದಿಲ್ಲ.”
ಠಾಣೆ ಇಲ್ಲವೇ ಯಾವುದೇ ಕಚೇರಿಯೊಳಗೆ ಮೊಬೈಲ್ ಒಯ್ಯುವುದು ನಿಮ್ಮ ಹಕ್ಕು. ವೀಡಿಯೋ ಮಾಡದಂತೆ ಇಲ್ಲವೇ ಮೊಬೈಲ್ ಬಳಸದಂತೆ ತಡೆಯಲು ಯಾವುದೇ ಲಿಖಿತ ನಿಯಮಗಳಿಲ್ಲ. ಯಾರಾದರೂ ನಿಮ್ಮನ್ನು ಠಾಣೆಯೊಳಗೆ ಮೊಬೈಲ್ ಬಳಸದಂತೆ ತಡೆದರೆ ಇಲ್ಲವೇ ವಿಡಿಯೋ ಮಾಡದಂತೆ ಅಡ್ಡಿಪಡಿಸಿದರೆ, ಅದಕ್ಕೆ ಬರವಣಿಗೆ ಆದೇಶದ ಮಾದರಿ (Copy) ತೋರಿಸಲು ಕೇಳಿ. ಬಾಯಿ ಮಾತಿನ ಆದೇಶಕ್ಕೆ ಬೆದರಬೇಡಿ. ಕಾನೂನು ನಿಮ್ಮ ಪರವಾಗಿದೆ. ಮಾಹಿತಿ ಹಕ್ಕು ಕಾಯಿದೆ (RTI) ಗಟ್ಟಿಯಾದ ಟೂಲ್, ಅದನ್ನು ಸರಿಯಾಗಿ ಬಳಸಿ.



