ಜಿಲ್ಲೆಯ ಎಲ್ಲ ರೈತರು ಫ್ರೂಟ್ಸ್ ಐಡಿ ಮತ್ತು ನೋಂದಣಿ ಸಂಖ್ಯೆ ಹೊಂದುವುದು ಹಾಗೂ ತಮ್ಮ ಎಲ್ಲ ಭೂ ಹಿಡುವಳಿಗಳನ್ನು ಫ್ರೂಟ್ಸ್ ತಂತ್ರಾಂಶಕ್ಕೆ ಜೋಡಣೆ ಮಾಡುವುದು ಕಡ್ಡಾಯ:ಜಿಲ್ಲಾಧಿಕಾರಿ ಸ್ನೇಹಲ್ ಆರ್.

WhatsApp Group Join Now

ಧಾರವಾಡ ಫ್ರೂಟ್ಸ್ ತಂತ್ರಾಂಶದಲ್ಲಿ ಈಗಾಗಲೇ ಧಾರವಾಡ ಜಿಲ್ಲೆಯಲ್ಲಿ 2.42 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 1.66 ಲಕ್ಷ ರೈತರು ಭೂ ಹಿಡುವಳಿಗಳನ್ನು ಹೊಂದಿರುತ್ತಾರೆ. ಜಿಲ್ಲೆಯಲ್ಲಿನ ಎಲ್ಲಾ ಭೂಹಿಡುವಳಿ ಹೊಂದಿರುವ ರೈತರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸುವುದು ಮತ್ತು ಫ್ರೂಟ್ಸ್ ನೋಂದಣಿ ಸಂಖ್ಯೆ (ಎಫ್‍ಐಡಿ) ಗಳಿಗೆ ರೈತರ ಎಲ್ಲಾ ಭೂ ಹಿಡುವಳಿಗಳನ್ನು ಜೋಡಣೆ ಮಾಡುವುದು ಅವಶ್ಯವಿರುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ಫ್ರೂಟ್ಸ್ (State Farmer Registry) ಹಾಗೂ ಭೂಮಿ (Land Records System) ಹೊಂದಾಣಿಕೆ (Synchronize) ಮಾಡುವುದು ಅತಿ ಮುಖ್ಯವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ಅನುಷ್ಠಾನಗೊಳಿಸುವ ಪಿ.ಎಂ.ಕಿಸಾನ್ ಯೋಜನೆಯು ಸೇರಿದಂತೆ ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ರೈತ ಬಾಂಧವರು ಕಡ್ಡಾಯವಾಗಿ ಕೇಂದ್ರ ನೋಂದಾಯಿತ ರೈತ ಸಂಖ್ಯೆ ಮಾಡಿಕೊಳ್ಳುವುದು ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಫ್ರೂಟ್ಸ್ ತಂತ್ರಾಂಶದಲ್ಲಿ ಮೊಬೈಲ್ ಸಂಖ್ಯೆ ನವೀಕರಣಗೊಳಿಸುವುದು, ರೈತರ ಇ-ಕೆವೈಸಿ ಮಾಡಿಸುವುದು, ರೈತರಿಂದ ವಿದ್ಯುನ್ಮಾನ ಸಹಮತಿ ಪತ್ರ ಪಡೆಯುವುದು. ಭೂ ಘೋಷಣೆ (ಎಲ್ಲಾ ಜಮೀನುಗಳನ್ನು ಎಫ್‍ಐಡಿ ಯೊಂದಿಗೆ ಜೋಡಣೆ ಮಾಡುವುದು) ಪ್ರಕ್ರಿಯೆಗಳನ್ನು ಕೈಗೊಳ್ಳುವುದು ಕಡ್ಡಾಯವಾಗಿರುತ್ತದೆ.

ಜಿಲ್ಲೆಯ ಎಲ್ಲ ರೈತರು ತಮ್ಮ ಎಲ್ಲಾ ಜಮೀನಿನ ವಿವರ ಹಾಗೂ ಆಧಾರ ಕಾರ್ಡ್ ಪ್ರತಿಯೊಂದಿಗೆ ಹತ್ತಿರದ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡು ಸೌಲಭ್ಯ ಪಡೆಯಲು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author