ಮಾ.18 ರಿಂದ ಏ.2ರವರಿಗೆ ಜಿಲ್ಲೆಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ವ್ಯವಸ್ಥಿತ, ಸುಸೂತ್ರ, ಪಾರದರ್ಶಕ ಪರೀಕ್ಷೆಗೆ ಜಿಲ್ಲಾಧಿಕಾರಿ ಡಾ.‌ಆನಂದ‌ ಕೆ. ಸೂಚನೆ

WhatsApp Group Join Now

ವಿಜಯಪುರ ಇದೇ ಮಾರ್ಚ್ 18 ರಿಂದ ಆರಂಭವಾಗುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಯಾವುದೇ ಲೋಪವಾಗದಂತೆ ಪಾರದರ್ಶಕ, ವ್ಯವಸ್ಥಿತ ಹಾಗೂ ಸುಸೂತ್ರವಾಗಿ ನಡೆಸಬೇಕೆಂದು ಪರೀಕ್ಷೆಗೆ ನಿಯೋಜಿತ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾಧಿಕಾರಿ ಡಾ. ಆನಂದ‌ ಕೆ. ಸೂಚನೆ ನೀಡಿದರು.

ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮದಿರದಲ್ಲಿ ಮಂಗಳವಾರ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪರೀಕ್ಷೆಗೆ ನಿಯೋಜಿತ ವಿವಿಧ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ವಹಿಸಬೇಕಾದ ಕರ್ತವ್ಯ ಹಾಗೂ ಜವಾಬ್ದಾರಿ ಹಾಗೂ ನಿರ್ವಹಣೆ ಕುರಿತ ಸಲಹೆ ನೀಡಿದರು.

ಸಿಸಿಟಿವಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಪರಿಶೀಲನೆ ನಡೆಸಬೇಕು. ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು. ತನ್ಮೂಲಕ ಪರೀಕ್ಷೆಯ ಪಾವಿತ್ರ್ಯತೆ ಕಾಯ್ದುಕೊಳ್ಳಬೇಕು ಎಂದರು.

ಬಿಇಒ, ತಹಶೀಲ್ದಾರ್ ಅವರು ತಾಲೂಕಿನಲ್ಲಿ ಸಭೆ ನಡೆಸಿ ಅಗತ್ಯ ಸೂಚನೆ ನೀಡಬೇಕು. ಮೈಕ್ರೊ ಪ್ಲ್ಯಾನಿಂಗ್ ಮಾಡಿಕೊಳ್ಳಬೇಕು ಪರೀಕ್ಷಾ ಪ್ರಕ್ರಿಯೆಯಲ್ಲಿ ಲೋಪ-ದೋಷಗಳಾಗಬಾರದು.‌ ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿ ನಿಯೋಜಿಸಬೇಕು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದೂ ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನೀಡಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ತಾಂತ್ರಿಕ ಸಮಸ್ಯೆಗಳು ಉದ್ಭವಿಸದಂತೆ ಪರಿಹಾರ ಸೌಲಭ್ಯ ಕಲ್ಪಿಸಿರುವುದನ್ನು ಮೇಲಾಧಿಕಾರಿಗಳು ಮುಂಚೆಯೇ ಖಚಿತ ಪಡಿಸಿಕೊಳ್ಳಬೇಕು. ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗುವ ನಿಟ್ಟಿನಲ್ಲಿ ಕ್ರಮವಹಿಸಬೇಕು.ಯಾವುದೇ ಗೊಂದಲಕ್ಕೆ ಒಳಗಾಗದೇ ಕಾರ್ಯನಿರ್ವಹಿಸಬೇಕು ಎಂದರು.

ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲಿನ 200 ಮಿ. ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗುವುದು. ತುರ್ತು ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯತಿಯ ಮುಖ್ಯ‌ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಮಾತನಾಡಿ, ಪರೀಕ್ಷಾ ಕೇಂದ್ರದ ಮುಖ್ಯ ಅಧಿಕ್ಷಕರ ಕಾರ್ಯ ಗುರುತರವಾಗಿದೆ. ನಮ್ಮ ಜಿಲ್ಲೆಯಲ್ಲಿ ಪರೀಕ್ಷೆಯನ್ನು ಯಾವುದೇ ಲೋಪ ಆಗದಂತೆ ನೋಡಿಕೊಳ್ಳಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.

ಪರೀಕ್ಷೆ ನಿಯಮಗಳನ್ವಯ ಕಾರ್ಯ ನಿರ್ವಹಿಸಿ, ತಮ್ಮ ನಿಯೋಜಿತ ಪರೀಕ್ಷಾ ಕೇಂದ್ರಗಳಲ್ಲಿ ಮಾಡಿಕೊಂಡಿರುವ ಪೂರ್ವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಬೇಕು. ಮುಂಚೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಯಾವುದೇ ಸೌಲಭ್ಯಗಳಿಲ್ಲ ಎಂಬ ದೂರುಗಳು ಬಾರದಂತೆ ಎಲ್ಲರೂ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಪರೀಕ್ಷೆ ಆರಂಭಗೊಳ್ಳಲಿಕ್ಕೆ‌ಇನ್ನೂ ಸಾಕಷ್ಟು ಸಮಯವಿದೆ. ಹಾಗಾಗಿ‌ ಪರೀಕ್ಷೆಗೆ ಮುನ್ನವೇ ಯಾವುದೇ ತಾಂತ್ರಿಕ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.‌ ಕೊಠಡಿಯಲ್ಲಿ ವಿದ್ಯುತ್, ಸಿಸಿಟಿವಿ ವ್ಯವಸ್ಥೆ, ಶೌಚಾಲಯ, ಸಾಕಷ್ಟು ಕುಡಿಯುವ ನೀರು ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದರು.

ಪರೀಕ್ಷಾ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ಪ್ರಶ್ನೆ ಪತ್ರಿಕೆಗಳು ತಲುಪುವಂತೆ ನೋಡಿಕೊಳ್ಳಬೇಕು. ಪರೀಕ್ಷೆಗೆ ನಿಯೋಜಿತ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು. ಪರೀಕ್ಷಾ ಕೇಂದ್ರಗಳಿಗೆ ಕಲ್ಪಿಸಿರುವ ವ್ಯವಸ್ಥೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಯಾವುದೇ ಸಮಸ್ಯೆಗಳು ಉದ್ಭವವಾದಲ್ಲಿ ತಕ್ಷಣಕ್ಕೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಪರೀಕ್ಷಾ ಮಾರ್ಗ ಸೂಚಿಗಳಂತೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದ ಅವರು, ಈ ವಿಷಯದಲ್ಲಿ ಆಯಾ‌ ಬಿಇಒಗಳು ಜವಾಬ್ದಾರಿ ಮಹತ್ತರವಾಗಿದ್ದು, ಕುಂಟು ನೆಪ ಹೇಳದೇ ಪಾರದರ್ಶಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಮನಗೌಡ ಹಟ್ಟಿ ಮಾತನಾಡಿ, ಎಸ್ ಎಸ್ ಎಲ್‌ಸಿ‌
ಪರೀಕ್ಷೆ ಪಾರದರ್ಶಕವಾಗಿ ನಡೆಯುವ ನಿಟ್ಟಿನಲ್ಲಿ ಎಲ್ಲ‌ 137 ಪರೀಕ್ಷಾ ಕೇಂದ್ರಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ‌ಕಲ್ಪಿಸಲಾಗುವುದು ಎಂದರು.

ಜಮಖಂಡಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರು ಆದ ಜಿಲ್ಲಾ ನೋಡಲ್ ಅಧಿಕಾರಿಗಳಾದ ಮಂಗಳಾ ನಾಯಕ ಮಾತನಾಡಿ, ಜೂನ್ ತಿಂಗಳಿಂದಲೇ ಪರೀಕ್ಷಾ ಸಿದ್ದತೆ ನಡೆದಿದೆ. ಹಾಗಾಗಿ ಎಲ್ಲರೂ‌ ಪಾರದರ್ಶಕ ಪರೀಕ್ಷೆಗೆ ಸಹಕರಿಸಬೇಕು ಎಂದರು. ಪ್ರಶ್ನೆ ಪತ್ರಿಕೆಯನ್ನು ನಿಗದಿತ ವೇಳೆಗೆ ವಿತರಿಸುವಂತೆ ನೋಡಿಕೊಳ್ಳುವುದು
ಪರೀಕ್ಷಾ ಮುಖ್ಯಸ್ಥರು ಜವಾಬ್ದಾರಿಯಾಗಿದೆ ಎಂದರು. ಪರೀಕ್ಷೆ ಸಂಬಂಧಿಸದೇ ಇರುವವರು ಪರೀಕ್ಷಾ ಕೇಂದ್ರದಲ್ಲಿ ತೆರಳದಂತೆ ನೋಡಿಕೊಳ್ಳಬೇಕು. ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಮತ್ತು‌ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ವೀರಯ್ಯ ಸಾಲಿಮಠ ಮಾತನಾಡಿ, ಮಾರ್ಚ್ 18 ರಿಂದ ಏಪ್ರಿಲ್ 02 ರವರೆಗೆ ನಡೆಯುವ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು 42,450 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆ. 137 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಯಾವುದೇ ಲೋಪವಾಗದಂತೆ ಎಲ್ಲ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಭೆಗೆ ವಿವರಿಸಿದರು.

ಈ ಸಂದರ್ಭದಲ್ಲಿ ಡೈಟ್‌ ಪ್ರಾಚಾರ್ಯರಾದ ಉಮಾದೇವಿ ಸೊನ್ನದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಅಧಿಕಾರಿ ರಾಹುಲ್ ಭಾವಿದೊಡ್ಡಿ, ವಿಷಯ ಪರಿವೀಕ್ಷಕ ಶಿವಾನಂದ ಬ್ಯಾಹಟ್ಟಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರು, ಪರೀಕ್ಷೆಗೆ ನಿಯೋಜಿತ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author