ಬೆಳಗಾವಿ ಡಾ.ಬಿ.ಆರ್. ಅಂಬೇಡ್ಕರ್ ಜೀವನದ ತತ್ವ-ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಬಡತನವು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಇವರ ಜೀವನವೇ ಸ್ಪಷ್ಟಪಡಿಸುತ್ತದೆ ಎಂದು ಉಪ ಮಹಾಪೌರರಾದ ಹನುಮಂತ ಕೊಂಗಾಲಿ ಅವರು ನುಡಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನದಲ್ಲಿ ಮಂಗಳವಾರ (ಏ.14) ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಅಂಬೇಡ್ಕರ್ ಅವರು ಬಡವರ ಹಾಗೂ ಹಿಂದುಳಿದ ವರ್ಗಗಳ ಉನ್ನತಿಗಾಗಿ ತಮ್ಮ ಸಂಪೂರ್ಣ ಜೀವನವನ್ನು ಅರ್ಪಿಸಿದ್ದು, ಸಮಾನತೆ ಆಧಾರಿತ ಸಮಾಜ ನಿರ್ಮಾಣಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದರು.
ಭಾರತೀಯ ಸಂವಿಧಾನವನ್ನು ರೂಪಿಸಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ಕಲ್ಪಿಸಿದ ಮಹತ್ವದ ವ್ಯಕ್ತಿತ್ವ ಅವರದು. ಜಾತಿ ಪದ್ಧತಿಯನ್ನು ನಿರ್ಮೂಲಗೊಳಿಸಿ ಸಮಾನತೆ ಸ್ಥಾಪನೆಗೆ ಅವರು ಕೈಗೊಂಡ ಪ್ರಯತ್ನಗಳು ಶ್ಲಾಘನೀಯ.
ಡಾ.ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಮೀಸಲಾತಿ ವ್ಯವಸ್ಥೆಯನ್ನು ಅಳವಡಿಸಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೆ ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದ ಮಹಾನ್ ನಾಯಕ.
ಶಿಕ್ಷಣ, ಸಂಘಟನೆ ಹಾಗೂ ಹೋರಾಟ ಎಂಬ ಅವರ ಮೂರು ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಬಲ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಉಪ ಮಹಾಪೌರರಾದ ಹನುಂತ ಕೊಂಗಾಲಿ ಅವರು ಕರೆ ನೀಡಿದರು.
ಪೋಲಿಸ್ ಆಯುಕ್ತ ಭೋರಸೆ ಭೂಷಣ ಗುಲಾಬರಾವ್ ಅವರು ಮಾತನಾಡಿ, ನಮ್ಮ ದೇಶಕ್ಕೆ ಸಂವಿಧಾನ, ಸಾಮಾಜಿಕ ನ್ಯಾಯ ಒದಗಿಸುವುದು ಸೇರಿದಂತೆ ಇನ್ನೂ ಅನೇಕ ಕಾರ್ಯಗಳನ್ನು ಮಾಡಿದಂತಹ ಮಹನ ಚೇತನ ಡಾ.ಬಿ.ಆರ್.ಅಂಬೇಡ್ಕರ ಅವರು. ಅವರು ತಮ್ಮ ಜೀವನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿರುವುದು ಪ್ರತಿಯೊಬ್ಬರಿಗೂ ಆದರ್ಶವಾಗಿದ್ದಾರೆ.
ಅಂಬೇಡ್ಕರ ಅವರು ದೇಶದ ಉನ್ನತಿಗಾಗಿ ಕಷ್ಟ ಪಟ್ಟಂತೆ ಇಂದು ನಾವೆಲ್ಲರೂ ಒಂದು ಎಂಬ ಮನೋಭಾವನೆಯಿಂದ ದೇಶವನ್ನು ಕಟ್ಟುವ ಕಾರ್ಯವಾಗಬೇಕಾಗಿದೆ ಎಂದು ನುಡಿದರು.
ಕಾರ್ಯಕ್ರಮದ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ.ಬಸವರಾಜ ಜಾಲವಾದಿ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ ಅವರು ಬಾಲ್ಯದಿಂದ ಹಿಡಿದು ತಮ್ಮ ಜೀವನದಲ್ಲಿ ಅನುಭವಿಸಿದಂತಹ ಕಷ್ಟ, ಅಸಮಾನತೆ ನಿವಾರಣೆಗೆ ತಮ್ಮ ಇಡೀ ಜೀವನ ಮುಡುಪಾಗಿಟ್ಟಿದ್ದು ಅವರ ಜೀವನವನ್ನು ಪ್ರತಿಯೊಬ್ಬರು ಆದರ್ಶವಾಗಿಟ್ಟುಕೊಳ್ಳಬೇಕು ಎಂದರು.
ಪರಿಶಿಷ್ಟ ಜಾತಿ,ಪ.ಪಂಗಡದ ಅಭಿವೃದ್ಧಿಗಾಗಿ ಎಲ್ಲ ಇಲಾಖೆಗಳಿಗೆ ಹರಿದು ಬರುತ್ತಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರ ಮೂಲಕ ಪರಿಶಿಷ್ಟರ ಅಭಿವೃದ್ಧಿಗಾಗಿ ಮುಂದಾಗಬೇಕಾಗಿದೆ. ಈ ಕಾರ್ಯಕ್ಕೆ ಶಿಕ್ಷಣ ಅತ್ಯಗತ್ಯವಾಗಿದ್ದು ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು.
ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದಂತಹ ಸಂವಿಧಾನ ಕೇವಲ ಅಸ್ಪೃಶ್ಯರ ಒಳಿತಿಗಾಗಿ ಇರದೇ ದೇಶದ ಕಟ್ಟಕಡೆ ವ್ಯಕ್ತಿಯೂ ಕೂಡ ನ್ಯಾಯಯುತ ಜೀವನ ಸಾಗಿಸಲು ಅನುಕೂಲಕರವಾಗಿದೆ. ಸರಕಾರಗಳು ಪರಿಶಿಷ್ಟರಿಗೆ ಜಾರಿಗೊಳಿಸಿರುವಂತಹ ಸೌಲಭ್ಯಗಳನ್ನು ನ್ಯಾಯಯುತವಾಗಿ ಅವರಿಗೆ ದೊರಕಿಸಿಕೊಡುವಂತಹ ಕಾರ್ಯವಾಗಬೇಕಾಗಿದೆ ಎಂದು ಹೇಳುತ್ತಾ ಡಾ.ಬಿ.ಆರ್.ಅಂಬೇಡ್ಕರ ಅವರ ಜೀವನ ಸಾಧನೆಗಳನ್ನು ವಿಸ್ತೃತವಾಗಿ ವಿವರಿಸಿದರು.
ಚಿತ್ರದುರ್ಗ ಛಲವಾದಿ ಜಗದ್ಗುರು ಪೀಠದ ಬಸವನಾಗಿದೇವಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಸವರಾಜ ಕುರಿಹುಲಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕರಾದ ಬಸವರಾಜ್ ಚನ್ನಯನವರ, ಮುಖಂಡರುಗಳಾದ ಮಲ್ಲೇಶ ಚೌಗಲೆ, ಮಲ್ಲೇಶಿ ಕುರಂಗಿ, ನಾಗೇಶ ಕಾಂಬಳೆ, ಸಿದ್ದರಾಯ ಮೇತ್ರಿ, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ಬಸವರಾಜ ರಾಯವ್ವಗೋಳ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು, ಗಣ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪಿಠೀಕೆ ಬೋಧಿಸಲಾಯಿತು.
ಸಂವಿಧಾನಶಿಲ್ಪಿಗೆ ಗಣ್ಯರ ಗೌರವ:
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ನಗರದ ಅಂಬೇಡ್ಕರ್ ಉದ್ಯಾನದಲ್ಲಿ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಶಾಸಕರಾದ ಆಸಿಫ್(ರಾಜು) ಸೇಠ್, ಮೇಯರ್ ಪ್ರೀತಿ ಕಾಮಕರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪಂಚಾಯತ ಸಿಇಓ ರಾಹುಲ್ ಶಿಂಧೆ, ಪೊಲೀಸ್ ಆಯುಕ್ತರಾದ ಬೊರಸೆ ಭೂಷಣ ಗುಲಾಬರಾವ್ ಸೇರಿದಂತೆ ಅನೇಕ ಗಣ್ಯರು, ಹಿರಿಯ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.



