ಬೆಳಗಾವಿ / ಬೆಂಗಳೂರು,
ಹೊಸ ಮತದಾರರ ಸೇರ್ಪಡೆ, ಮೃತಪಟ್ಟ ಅಥವಾ ಸ್ಥಳಾಂತರಗೊಂಡ ಮತದಾರರ ಹೆಸರುಗಳನ್ನು ತೆಗೆದುಹಾಕುವುದು, ವಿವರಗಳ ತಿದ್ದುಪಡಿ ಸೇರಿದಂತೆ ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯನ್ನು ಶೇಕಡಾ 100% ರಷ್ಟು ಪೂರ್ಣಗೊಳಿಸಲು ಬೂತ್ ಮಟ್ಟದ ಅಧಿಕಾರಿಗಳು (BLO) ಮನೆಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸಬೇಕು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅವರು ತಿಳಿಸಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇಂದು ಮತದಾರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (SIR) ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿಯನ್ನು ವಿಶೇಷ ಪರಿಷ್ಕರಣೆ ನಡೆಸಲಾಗುತ್ತಿದ್ದು, ಮತದಾರರ ಪಟ್ಟಿಯ ಶುದ್ಧತೆಗಾಗಿ ಈ ಕ್ರಮ ಅಗತ್ಯವಿದೆ. ಬೂತ್ ಮಟ್ಟದ ಅಧಿಕಾರಿಗಳ ಪರಿಷ್ಕರಣೆ ಕಾರ್ಯ ಚುರುಕುಗೊಳಿಸಬೇಕು ಎಂದು ತಿಳಿಸಿದರು .
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಸಕಾಲದಲ್ಲಿ ನೀಡಬೇಕು. ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳುಬೇಕು ಎಂದರು.
ರಾಜಕೀಯ ಪಕ್ಷಗಳಿಂದ ಸ್ವೀಕರಿಸಲ್ಪಡುವ ದೂರುಗಳು, ಆಕ್ಷೇಪಣೆಗಳು ಹಾಗೂ ಅರ್ಜಿಗಳನ್ನು ಸರಿಯಾಗಿ ನೋಂದಾಯಿಸಿ, ಅವುಗಳ ದಾಖಲೆ ಪ್ರತಿಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಬೇಕು. ದೂರುಗಳ ವಿಲೇವಾರಿಯನ್ನು ಚುನಾವಣಾ ಆಯೋಗದ ನಿಯಮಾನುಸಾರ ತ್ವರಿತವಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಪರಿಷ್ಕರಣೆ ಕಾರ್ಯದ ಪ್ರಗತಿ ಹಾಗೂ ಎದುರಾಗುವ ಸಮಸ್ಯೆಗಳ ಕುರಿತು ವಾರಕ್ಕೊಮ್ಮೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಬೇಕು. ಸಭೆಯಲ್ಲಿ ಪಡೆದ ಸಲಹೆಗಳು ಹಾಗೂ ಆಕ್ಷೇಪಣೆಗಳನ್ನು ದಾಖಲಿಸಿಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು.
ಪ್ರಸ್ತುತ ಚುನಾವಣೆ ಪ್ರಕ್ರಿಯೆ ಸುಲಭವಾಗಿದೆ. ಪ್ರತಿ ಮಾಹಿತಿ ಬೂತ್ ಮಟ್ಟದ ಅಧಿಕಾರಿಗಳ ಕೈಗಳಲ್ಲಿದೆ. ಮನೇಲಿ ಬಹಳ ದಿನಗಳಿಂದ ಮತದಾರರು ಇಲ್ಲದೇ ಹೋದಲ್ಲಿ ಅಂತಹ ಪ್ರಕರಣಗಳ ಕುರಿತು ಸಮೀಪದ ಪೊಲೀಸ್ ಠಾಣೆಯಲ್ಲಿ ಮಾಹಿತಿ ಪಡೆಯಬೇಕು ಎಂದರು.
ಶೇಕಡಾ 100% ರಷ್ಟು ಪರಿಷ್ಕರಣೆಗೆ ಸೂಚನೆ :
ಪ್ರತಿ ತಾಲೂಕುಗಳಲ್ಲಿ ಮತದಾರರ ಪರಿಷ್ಕರಣೆ ಶೇಕಡ 50% ಕ್ಕಿಂತಲೂ ಕಡಿಮೆ ಇರದಂತೆ 100% ಗುರಿ ಸಾಧಿಸಬೇಕು.
ಬೂತ್ ಮಟ್ಟದ ಅಧಿಕಾರಿಗಳ ಸ್ಥಳೀಯವಾಗಿ ಏನಾದರೂ ಸಮಸ್ಯೆ ಎದುರಾದಲ್ಲಿ ಮೇಲಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಪರಿಶೀಲಿಸಿಕೊಳ್ಳಬೇಕು.
ಶೇಕಡಾ 100% ರಷ್ಟು ಮತದಾರ ಪರಿಷ್ಕರಣೆ ಮಾಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಮತದಾರ ಪರಿಷ್ಕರಣೆ ನಮೂನೆಯನ್ನು ವಿತರಣೆಯಾದ ಬಳಿಕ, ಸಂಗ್ರಹವಾದ ಮಾಹಿತಿಯನ್ನು ಕಾಲಕಾಲಕ್ಕೆ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಬೇಕು.
ಜಿಲ್ಲೆಯ ಎಲ್ಲಾ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಮತದಾರ ಪರಿಷ್ಕರಣೆಯಲ್ಲಿ ಹಾಗೂ ಮಾಹಿತಿ ಸಂಗ್ರಹಣೆಯಲ್ಲಿ ಆಗುವ ವಿವಿಧ ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳು ಚರ್ಚಿಸಿ ಮಾಹಿತಿ ಪಡೆದುಕೊಳ್ಳಬೇಕು. ಆಗಸ್ಟ್ 8 ರವರೆಗೆ ಅವಕಾಶವಿದ್ದು, ಇನ್ನೂ ಕೆಲವಡೆ ವಿತರಣೆಯಾಗದ ಭಾಗದಲ್ಲಿ ಸಂಪೂರ್ಣ ಮತದಾರರ ಪರಿಷ್ಕರಣೆ ಮಾಡಬೇಕು ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದರು.
ಚುನಾವಣಾ ಆಯೋಗ ಹೊರಡಿಸಿರುವ ಎಲ್ಲಾ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಯಾವುದೇ ಲೋಪ ಅಥವಾ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು ಅಧಿಕಾರಿಗಳಿಗೆ ತಿಳಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ರೋಹಿತ್ ಸಿಂಗ್,
ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, (ARO, AERO) ರಿಟರ್ನಿಂಗ್ ಅಧಿಕಾರಿಗಳು, ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಸೇರಿದಂತೆ ನಿಯೋಜಿತ ಚುನಾವಣಾ ಸಿಬ್ಬಂದಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಬೂತ್ ಮಟ್ಟದಲ್ಲಿ ಪರಿಶೀಲನೆ:
ಸಭೆಯ ಬಳಿಕ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ವೈ. ಅನ್ಬುಕುಮಾರ್ ಮತ್ತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಮೊಹಮ್ಮದ್ ರೋಷನ್ ಅವರು ವಡಗಾಂವ ಭಾಗದ ಖಾಸಬಾಗ ನಂಬರ್ 3 ಸರ್ಕಾರಿ ಶಾಲೆಗೆ ಭೇಟಿ ನೀಡಿ ಮತದಾರ ಪಟ್ಟಿ ಸಮಗ್ರ ವಿಶೇಷ ಪರಿಷ್ಕರಣೆ ಕುರಿತು ನಿಯೋಜಿತ ಬೂತ್ ಮಟ್ಟದ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.



