ಬೆಂಗಳೂರು: ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರಿಂದ ಸ್ವೀಕೃತವಾಗುವ ಪ್ರಥಮ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಕಠಿಣ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಸುತ್ತೋಲೆ ಹೊರಡಿ ಸಿರುವ ಆಯೋಗ, ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್4(1) ಎರ ಮಾಹಿತಿ ಮತ್ತು 4(1)ಬಿ ಅನ್ವಯ 17 ಅಂಶಗಳನ್ನು ಒಳಗೊಂಡ ಪರಿಪೂರ್ಣಗೊಳಿಸಿದ ಮಾಹಿತಿಯನ್ನು ಆಯಾ ಪ್ರಾಧಿಕಾರಿಗಳು ಪ್ರತಿ ವರ್ಷ ಡಿಸೆಂಬರ್ 31ರ ಒಳಗೆ ಇಲಾಖೆ ವೆಬ್ ಸೈಟ್‌ನಲ್ಲಿ ಪ್ರಕಟಿಸಲು ತಿಳಿಸಿದೆ. ರಾಜ್ಯದ ವಿವಿಧ ಇಲಾಖೆ, ಆಯೋಗ ವ್ಯಾಪ್ತಿಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗಳು ನಿಯಮಾನುಸಾರ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂಬುದು ಆಯೋಗದ ಗಮನಕ್ಕೆ ಬಂದಿದೆ. ಈ ಕಾಯ್ದೆ ಯಶಸ್ವಿಯಾಗಿ ಅನುಷ್ಠಾನಕ್ಕೆ ತರುವ ಗುರುತರವಾದ ಹೊಣೆ ಅಧಿಕಾರಿಗಳ ಮೇಲಿದ್ದರು ನಿರ್ಲಕ್ಷ್ಯ
ವಹಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ ಎಂದು ಆಯೋಗ ತಿಳಿಸಿದೆ.
ಇನ್ನೂ ಮುಂದೆ ಎಲ್ಲ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಪ್ರಥಮ ಮೇಲ್ಮನವಿ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮದಡಿ ಸ್ವೀಕೃತ ವಾಗುವ ಅರ್ಜಿ ಮತ್ತು ಪ್ರಥಮ ಮೇಲ್ಮನವಿಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸಬೇಕು. ಸರ್ಕಾರ ಹೊರಡಿಸಿರುವ ಸುತ್ತೋಲೆ, ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
ಕನಾಟಕ ಮಾಹಿತಿ ಆಯೋಗದ ಮುಂದೆ ದಾಖಲಾದ ಪ್ರಕರಣಗಳಲ್ಲಿ ಪ್ರತಿವಾದಿಯಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯು ವಿಚಾರಣೆಗೆ ಹಾಜರಾಗಲು ಆಯೋಗದಿಂದ ನೋಟಿಸ್ ಜಾರಿಗೊಳಿಸಿದಾಗ, ಸಂಬಂಧಪಟ್ಟ ಸಾರ್ವಜನಿಕ ಅಧಿಕಾರಿಯ ಕಡ್ಡಾಯವಾಗಿ ಖುದ್ದು ಹಾಜರಾಗಬೇಕು. ಬೇರೆ ಅಥವಾ ಮಾಹಿತಿ ಹಕ್ಕಿನ ಬಗ್ಗೆ ಅರಿವಿಲ್ಲದ ಅಧಿಕಾರಿಗಳನ್ನು ಕಳುಹಿಸಬಾರದು ಎಂದು ಆಯೋಗ ಸುತ್ತೋಲೆಯಲ್ಲಿ ತಿಳಿಸಿದೆ.



