ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್.ಎನ್ ವಿರುದ್ಧ ಕರ್ತವ್ಯ ಲೋಪ, ನಿರ್ಲಕ್ಷ್ಯತೆ ಹಾಗೂ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ತೆರೆದು ನಮೂನೆ-3 ವಿತರಿಸಿರುವ ಕುರಿತು ಹಲವಾರು ಗಂಭೀರ ದೂರುಗಳು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.
ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಮೈಸೂರು ಜಿಲ್ಲಾಧಿಕಾರಿಗಳು ದಿನಾಂಕ-03.01.2026ರಂದು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಕಂದಾಯ) ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, 15 ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.
ಈ ಸಂಬಂಧ ತನಿಖಾ ತಂಡದ ಅಧಿಕಾರಿಯಾದ ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಕಂದಾಯ) ಸೋಮಶೇಖರ್ ಅವರು ದಿನಾಂಕ 16.05.2026ರಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಪತ್ರದಲ್ಲಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ಸರ್ವೆ ನಂಬರ್ಗಳ ಖಾತಾ ದಾಖಲಾತಿಗಳ ಕುರಿತು ದೂರುಗಳು ಬಂದಿರುವುದರಿಂದ ಸವಿಸ್ತಾರ ತನಿಖೆಗೆ ಹೆಚ್ಚಿನ ಕಾಲಾವಕಾಶ ಅಗತ್ಯವಿದೆ ಎಂದು ತಿಳಿಸಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಸಂಬಂಧಪಟ್ಟ ಕರವಸೂಲಿಗಾರ, ಕಂದಾಯ ನಿರೀಕ್ಷಕ ಹಾಗೂ ಮುಖ್ಯಾಧಿಕಾರಿಗಳನ್ನು ಬೇರೆ ಸ್ಥಳೀಯ ಸಂಸ್ಥೆಗಳಿಗೆ ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ತನಿಖಾ ವರದಿಯಲ್ಲಿ, ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಇ-ಆಸ್ತಿ ತಂತ್ರಾಂಶ ಪೋರ್ಟಲ್ನಲ್ಲಿ 06.03.2026ರ ಅಂತ್ಯದ ವೇಳೆಗೆ ಮುಖ್ಯಾಧಿಕಾರಿಯವರ ಲಾಗಿನ್ನಲ್ಲಿ 858 ಅರ್ಜಿಗಳು ಹಾಗೂ ಕಂದಾಯ ನಿರೀಕ್ಷಕರ ಲಾಗಿನ್ನಲ್ಲಿ 207 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದಿರುವುದು ಬೆಳಕಿಗೆ ಬಂದಿದೆ. ಸರ್ಕಾರದ ಸುತ್ತೋಲೆ ಹಾಗೂ ಮಾರ್ಗಸೂಚಿಗಳನ್ನು ಪಾಲಿಸದೇ ಸಾರ್ವಜನಿಕರಿಗೆ ನಿಗದಿತ ಅವಧಿಯಲ್ಲಿ ಸೇವೆ ಒದಗಿಸಲು ಅಧಿಕಾರಿಗಳು ವಿಫಲರಾಗಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕರಿಂದ ಬಂದ ದೂರುಗಳನ್ನು ಪರಿಗಣಿಸಿದಾಗ, ಕೆಲಸ ಕಾರ್ಯಗಳಲ್ಲಿ ಉದ್ದೇಶಪೂರ್ವಕ ವಿಳಂಬ ಮಾಡಲಾಗುತ್ತಿದ್ದು, ಲಂಚದ ಹಣಕ್ಕೆ ಬೇಡಿಕೆ ಇಟ್ಟು ತಪ್ಪು ದಾಖಲಾತಿಗಳನ್ನು ನೀಡಿರುವ ಆರೋಪಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದು ತನಿಖಾ ತಂಡ ತಿಳಿಸಿದೆ.
ಸರ್ಕಾರದ ಸರ್ವೆ ನಂ.259/5ಕ್ಕೆ ಸಂಬಂಧಿಸಿದ ಮೂಲ ದಾಖಲಾತಿಗಳನ್ನು ಪರಿಶೀಲಿಸದೇ, ಸರ್ಕಾರಿ ಆಸ್ತಿ ಎಂಬುದು ತಿಳಿದಿದ್ದರೂ ಖಾಸಗಿ ವ್ಯಕ್ತಿಗಳಿಗೆ ಇ-ಆಸ್ತಿ ಸೃಜಿಸಿ ನಂತರ ಅಧಿಕಾರ ಮೀರಿಸಿ ಖಾತೆಗಳನ್ನು ರದ್ದುಪಡಿಸಿರುವುದಾಗಿ ತಹಶೀಲ್ದಾರ್ ಅವರಿಗೆ ವರದಿ ಸಲ್ಲಿಸಿರುವುದು ಕೂಡ ಕರ್ತವ್ಯ ಲೋಪವೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(ಡಿ) ಅನ್ವಯ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಅಮಾನತು ಹಾಗೂ ಇಲಾಖಾ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿಗಳು ಶಿಫಾರಸು ಮಾಡಿದ್ದಾರೆ.
ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಅವರು ಕೆ.ಎಂ.ಎ.ಎಸ್. ಮುಖ್ಯಾಧಿಕಾರಿ ಶ್ರೇಣಿ-1 ಅಧಿಕಾರಿಯಾಗಿರುವುದರಿಂದ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಇನ್ನೊಂದೆಡೆ, ಪ್ರಥಮ ದರ್ಜೆ ಕಂದಾಯ ನಿರೀಕ್ಷಕರಾದ ಮಂಜುನಾಥ್.ಎನ್ (ಮೂಲತಃ ಪ್ರಥಮ ದರ್ಜೆ ಸಹಾಯಕರು, ಮಹಾನಗರ ಪಾಲಿಕೆ ವೃಂದ) ಅವರ ಶಿಸ್ತು ಪ್ರಾಧಿಕಾರ ಪೌರಾಡಳಿತ ನಿರ್ದೇಶನಾಲಯವಾಗಿರುವ ಹಿನ್ನೆಲೆಯಲ್ಲಿ, ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಲಾಗಿದೆ.
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅಕ್ರಮ ಆರೋಪ: ಕಂದಾಯ ನಿರೀಕ್ಷಕ ಅಮಾನತು

WhatsApp Group
Join Now


