ಗದಗ ಜಿಲ್ಲೆ ರೋಣ ಮತಕ್ಷೇತ್ರದ ಜನಪ್ರಿಯ ಹಾಗೂ ಹಿರಿಯ ಶಾಸಕರಾದ ಜಿ. ಎಸ್. ಪಾಟೀಲ್ ಅವರಿಗೆ ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗಲಿ ಎಂದು ಪ್ರಾರ್ಥಿಸಿ, ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ ವೀರಬಸಪ್ಪ ಡುಮ್ಮಣ್ಣವರ ಅವರು ಗ್ರಾಮದಲ್ಲಿ ಸುಡುಬಿಸಿಲನ್ನೂ ಲೆಕ್ಕಿಸದೆ ದಿಡ ನಮಸ್ಕಾರ (ದಂಡ ನಮಸ್ಕಾರ) ಹಾಕುವ ಮೂಲಕ ವಿಶಿಷ್ಟ ಹರಕೆ ಸಲ್ಲಿಸಿದರು.

ಗ್ರಾಮದ ಇತಿಹಾಸ ಪ್ರಸಿದ್ಧ ವೀರಭದ್ರೇಶ್ವರ ದೇವಸ್ಥಾನದಿಂದ ಭೀಮಾಂಬಿಕ ದೇವಸ್ಥಾನದ ವರೆಗೆ ಮಂಗಲ ವಾದ್ಯಗಳು, ಡೊಳ್ಳು ಕುಣಿತದ ಭವ್ಯ ಮೆರವಣಿಗೆಯೊಂದಿಗೆ ಸಾಗಿದ ದರ್ಶನ ಅವರು, ಶಾಸಕರ ಮೇಲಿನ ಅಪಾರ ಭಕ್ತಿ ಮತ್ತು ಕ್ಷೇತ್ರದ ಅಭಿವೃದ್ಧಿಯ ಕನಸಿನೊಂದಿಗೆ ಈ ಕಠಿಣ ಹರಕೆಯನ್ನು ಪೂರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡರಾದ ಕಳಕಪ್ಪ ವಟ್ಟಿನ ಅವರು, ಜಿ. ಎಸ್. ಪಾಟೀಲ್ ಅವರು ಸುಮಾರು 40 ವರ್ಷಗಳ ಸುದೀರ್ಘ ಕಾಲದಿಂದ ಕಾಂಗ್ರೆಸ್ ಪಕ್ಷಕ್ಕೋಸ್ಕರ ಅತ್ಯಂತ ನಿಷ್ಠೆಯಿಂದ ಶ್ರಮಿಸಿದ್ದಾರೆ. ಗದಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುವಲ್ಲಿ ಅವರ ಪಾತ್ರ ಹಿರಿದಾಗಿದೆ. ಇಂತಹ ಹಿರಿಯ, ಅನುಭವಿ ಹಾಗೂ ಮುತ್ಸದ್ದಿ ರಾಜಕಾರಣಿಗೆ ಈ ಬಾರಿ ಹೈಕಮಾಂಡ್ ಸಚಿವ ಸ್ಥಾನವನ್ನು ನೀಡಲೇಬೇಕು. ಒಂದು ವೇಳೆ ಸಚಿವ ಸ್ಥಾನ ತಪ್ಪಿದರೆ ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.
ಹರಕೆ ಹೊತ್ತ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ದರ್ಶನ ವೀರಬಸಪ್ಪ ಡುಮ್ಮಣ್ಣವರ ಮಾತನಾಡಿ, ಜಿ. ಎಸ್. ಪಾಟೀಲ್ ಅವರು ಸಚಿವರಾದರೆ ನಮ್ಮ ಭಾಗದ ಅಭಿವೃದ್ಧಿ ಮತ್ತಷ್ಟು ವೇಗವಾಗಿ ಆಗುತ್ತದೆ. ಹೀಗಾಗಿ ಅವರು ಸಚಿವರಾಗಲಿ ಎಂಬುದು ನಮ್ಮೆಲ್ಲ ಯುವ ಕಾರ್ಯಕರ್ತರ ಹಾಗೂ ಕ್ಷೇತ್ರದ ಜನರ ಹಾರೈಕೆಯಾಗಿದೆ. ಆ ವೀರಭದ್ರೇಶ್ವರ ಹಾಗೂ ತಾಯಿ ಭೀಮಾಂಬಿಕೆ ನಮ್ಮ ಪ್ರಾರ್ಥನೆಯನ್ನು ಖಂಡಿತವಾಗಿ ಈಡೇರಿಸುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
ಈ ವಿಶಿಷ್ಟ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಮುಖ ಮುಖಂಡರಾದ ಚಂದ್ರು ಗಂಗೂರಗುಂಡ, ಅಂದಪ್ಪ ಛಲವಾದಿ, ಯಲ್ಲಪ್ಪ ಮಾದರ, ದೇವಪ್ಪ ಅಣ್ಣಿಗೇರಿ, ಪ್ರದೀಪ ಬನ್ನಿಗೋಳ, ಅಶೋಕ ತಳವಾರ, ಅಂದಪ್ಪ ತಳವಾರ, ರವಿ ಮಾದರ ಸೇರಿದಂತೆ ನೂರಾರು ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಶಾಸಕರ ಪರವಾಗಿ ಜಯಘೋಷಗಳನ್ನು ಕೂಗಿದರು



