ಸವದತ್ತಿ ತಾಲೂಕಾ ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಮತ್ತು ವಲಯ ಅರಣ್ಯಾಧಿಕಾರಿಗಳ ಇಲಾಖೆ, ಇವರುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕಃ 05-06-2026 ರಂದು ಸರ್ಕಾರಿ ಶಾಸಕರ ಮಾದರಿ ಶಾಲೆ ಗುರ್ಲಹೊಸೂರ, ಸವದತ್ತಿಯಲ್ಲಿ “ವಿಶ್ವ ಪರಿಸರ ದಿನ” ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹವ್ಮಿುಕೊಳ್ಳಲಾಗಿತ್ತು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಶ್ರೀ. ಸಿದ್ರಾಮ.ಟಿ ರವರು ಸಸಿಗೆ ನೀರೆರೆಯುವುದರ ಮೂಲಕ ಉದ್ಫಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಜೀವ ಪ್ರಪಂಚದ ಉಸಿರಾಗಿರುವ ಪ್ರಕೃತಿಯನ್ನು ರಕ್ಷಿಸುವ ಮತ್ತು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಪ್ರತಿವರ್ಷ ಜೂನ್ 5 ರಂದು ‘ವಿಶ್ವ ಪರಿಸರ ದಿನ’ವನ್ನು ಅತ್ಯಂತ ಜವಾಬ್ದಾರಿಯುತವಾಗಿ ಆಚರಿಸಲಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳ ಭಾಷಣ ಮಾಡಿದ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕಾ ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಶ್ರೀ. ದೇವದಾಸ ಎಚ್. ರವರು ಮಾತನಾಡಿ ಪ್ರಕೃತಿಯನ್ನು ಯಾವಾಗಲೂ ಒಂದು ಹೆಣ್ಣಿಗೆ ಹೋಲಿಸುತ್ತಾರೆ. ಪ್ರಕೃತಿ ಇರೋದೆ ನಮಗೋಸ್ಕರ ನಮ್ಮ ಸುತ್ತಮುತ್ತಲು ಗಿಡ-ಮರಗಳು, ಸಸ್ಯಗಳು ಇದ್ದರೆ ನಮಗೆ ಸಾಕಷ್ಟು ಗಾಳಿ, ಮಳೆ ಸಿಗುತ್ತದೆ. ಪ್ರಕೃತಿಯನ್ನು ನಾವು ಸಂರಕ್ಷಣೆ ಮಾಡಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಪ್ರಕೃತಿ ಏನಾದರೂ ವಿಕೋಪಕ್ಕೆ ಹೋದರೆ ಪ್ರವಾಹ, ಭೂಕಂಪ, ಬಿರುಗಾಳಿ, ಮುಂತಾದವುಗಳು ಉಂಟಾಗುತ್ತವೆ. ಆದ್ದರಿಂದ ನಮ್ಮ ಸುತ್ತಮುತ್ತಲು ಗಿಡ ಮರಗಳನ್ನು ಬೆಳೆಸುತ್ತಾ ಪರಿಸರವನ್ನು ಸ್ವಚಗೊಳಿಸುತ್ತಾ ನಮ್ಮ ಪ್ರಕೃತಿಯನ್ನು ಕಾಪಾಡಿಕೊಳ್ಳೋನಾ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಜೆ.ಬಿ.ಮುನವಳ್ಳಿ, ಉಪಾಧ್ಯಕ್ಷರಾದ ಎಮ್.ಎಸ್.ಹುಬ್ಬಳ್ಳಿ, ಕಾರ್ಯದರ್ಶಿಯಾದ ಎಸ್.ಎಸ್.ಕಾಳಪ್ಪನವರ, ಮಹಿಳಾ ಪ್ರತಿನಿಧಿ ನ್ಯಾಯವಾದಿ ಎಸ್.ವಾಯ್.ಶಿಬಾರಗಟ್ಟಿ, ಮತ್ತು ಉಪ ವಲಯ ಅರಣ್ಯಾಧಿಕಾರಿಗಳಾದ ವಿನಾಯಕ ಪಾಟೀಲ, ನ್ಯಾಯವಾದಿಗಳಾದ ಎಮ್.ಬಿ.ದ್ಯಾಮನಗೌಡರ, ಆರ್.ಎಮ್.ನಿಡೋನಿ, ವಾಯ್.ಎನ್.ಪಾಸ್ತೆ, ಎಮ್.ಎ.ಅಂಗಡಿ, ಆರ್.ಆರ್.ಚಿನಿವಾಲರ ಇತರರು ಉಪಸ್ಥಿತರಿದ್ದರು.
ಶಿಕ್ಷಕರಾದ ಎಮ್.ಬಿ.ಅಲಾರಕಿ ಸ್ವಾಗತಿಸಿ, ನಿರೂಪಿಸಿದರು. ಶಾಲೆಯ ಪ್ರಧಾನ ಗುರುಗಳಾದ ಎಮ್.ಬಿ. ಕಮ್ಮಾರ ವಂದಿಸಿದರು.



