ಬೆಳಗಾವಿ ಜಿಲ್ಲೆ ಸವದತ್ತಿ ನಗರದ
ಪೊಲೀಸ್ ಠಾಣೆ ಆವರಣದಲ್ಲಿ
ಮುಂಬರುವ ಮೊಹರಂ ಹಬ್ಬವನ್ನು ಶಾಂತಿಯುತ ಹಾಗೂ ಸೌಹಾರ್ದಯುತವಾಗಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಶಾಂತಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಭಾಗವಹಿಸಿ, ಕೋಮು ಸೌಹಾರ್ದತೆಯನ್ನು ಎತ್ತಿಹಿಡಿಯುವ ಮೂಲಕ ಈ ಬಾರಿ ಹಬ್ಬವನ್ನು ಸಂಪ್ರದಾಯದಂತೆ ಸಾಮರಸ್ಯದಿಂದ ಆಚರಿಸಲು ಒಮ್ಮತದಿಂದ ನಿರ್ಧರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಪಿಐ ಸುರೇಶ ಬೆಂಡೆಗುಂಬಳ ಅವರು, ಸವದತ್ತಿ ನಗರವು ದಶಕಗಳಿಂದ ಹಿಂದೂ ಮುಸ್ಲಿಂ ಬಾಂಧವ್ಯ ಮತ್ತು ಐಕ್ಯತೆಗೆ ಹೆಸರಾಗಿದೆ. ಇಲ್ಲಿನ ಜನರು ಎಲ್ಲ ಹಬ್ಬಗಳನ್ನು ಪರಸ್ಪರ ಪ್ರೀತಿ ಹಾಗೂ ವಿಶ್ವಾಸದಿಂದ ಆಚರಿಸುತ್ತಿರುವುದು ಹೆಮ್ಮೆಯ ವಿಷಯ. ಮೊಹರಂ ಹಬ್ಬವನ್ನು ಧಾರ್ಮಿಕ ಶ್ರದ್ದೆ ಹಾಗೂ ಭಕ್ತಿಯಿಂದ ಸಂಪ್ರದಾಯಬದ್ಧವಾಗಿ ಆಚರಿಸಬೇಕು ಹೈಕೋರ್ಟ್ ಆದೇಶದಂತೆ ಹಬ್ಬದ ಆಚರಣೆಯಲ್ಲಿ ಡಿಜೆ ಬಳಕೆಗೆ ಸಂಪೂರ್ಣ ನಿಷೇಧವಿದೆ.
ಪ್ರತಿಯೊಬ್ಬರೂ ಇದನ್ನು ಕಡ್ಡಾಯವಾಗಿ ಪಾಲಿಸಬೇಕು. ಡಿಜೆಗೆ ಬದಲಾಗಿ ಕರಡಿ ಮಜಲು, ಲೇಜಿಮ್ ಮುಂತಾದ ಸಾಂಪ್ರದಾಯಿಕ ಕಲೆಗಳಿಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು. ಅಲ್ಲದೆ, ಸಮಾಜದ ಶಾಂತಿಗೆ ಭಂಗ ತರುವ ಅಥವಾ ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡುವ ವ್ಯಕ್ತಿಗಳ ಬಗ್ಗೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೊಹರಂನ ಕೊನೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ಹಿಂದಿನಂತೆ ಒಗ್ಗೂಡಿ, ಅರ್ಥಪೂರ್ಣವಾಗಿ ಆಚರಿಸುವ
ಪದ್ಧತಿಯನ್ನು ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಈ ಒಂದು ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು, ಸ್ಥಳೀಯ ಗಣ್ಯರು ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



