ಗದಗ ಜಿಲ್ಲೆ ರೋಣ-ನರಗುಂದ ರಸ್ತೆಯ ಬಸಲಾಪುರ ಕ್ರಾಸ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿಯನ್ನು ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರ ನೇತೃತ್ವದ ತಂಡವು ದಾಳಿ ನಡೆಸಿ ಜಪ್ತಿ ಮಾಡಿದೆ.
18/06/2026 ರಂದು ರಾತ್ರಿ ಚಿಕ್ಕಮನ್ನೂರಿನಿಂದ ರೋಣದ ಕಡೆಗೆ ಅಟೋದಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ಆಹಾರ ನಿರೀಕ್ಷಕಿ ಸುವರ್ಣ ಜಮ್ಮನಕಟ್ಟಿ ಅವರು ದಾಳಿ ನಡೆಸಿದರು. ಪರಿಶೀಲನೆ ನಡೆಸಿದಾಗ ಆಟೋದಲ್ಲಿ ಪಡಿತರ ಅಕ್ಕಿ ತುಂಬಿದ 15 ಚೀಲಗಳು ಪತ್ತೆಯಾಗಿವೆ. ತಲಾ 41 ಕೆಜಿ ತೂಕದ 15 ಚೀಲಗಳ ಅಂದರೆ ಒಟ್ಟು 6 ಕ್ವಿಂಟಲ್ 10 ಕೆಜಿ ತೂಕದ ಅಕ್ಕಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಅಕ್ಕಿಯ ಅಂದಾಜು ಮೌಲ್ಯ 13,725 ರೂಪಾಯಿಗಳಾಗಿವೆ.
ಆಟೋಚಾಲಕನಾದ ಹೊಯ್ದಗೋಳ ಗ್ರಾಮದ ನಾಗಪ್ಪ ಶೆಖಪ್ಪ ಭಜಂತ್ರಿ (29) ಎಂಬಾತ ಯಾವುದೇ ಅಧಿಕೃತ ಪಾಸ್ ಅಥವಾ ಪರ್ಮಿಟ್ ಇಲ್ಲದೆ ಅಕ್ರಮವಾಗಿ ಅಕ್ಕಿಸಾಗಾಟ ಮಾಡುತ್ತಿದ್ದದ್ದು ತನಿಖೆಯಿಂದ ತಿಳಿದುಬಂದಿದೆ. ಸದ್ಯ ಆಟೋ ಸಮೇತ ಅಕ್ರಮ ಅಕ್ಕಿಯನ್ನು ಜಪ್ತಿ ಮಾಡಲಾಗಿದ್ದು, ಆರೋಪಿ ನಾಗಪ್ಪ ಭಜಂತ್ರಿ ಮತ್ತು ಅಕ್ಕಿ ಖರೀದಿದಾರ ಶ್ರೀಕಾಂತ್ ಭಜಂತ್ರಿ ವಿರುದ್ಧ ರೋಣ ಪೊಲೀಸ್ ಠಾಣೆಯಲ್ಲಿ ಅತ್ಯಗತ್ಯ ವಸ್ತುಗಳ ಕಾಯ್ದೆ 1955 ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.



