
ಚಿಕ್ಕೊಡಿ:- ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ರ ಅಂಗವಾಗಿ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ ಸಿ.ಇ.ಓ ರಾಹುಲ ಶಿಂಧೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿ ಚಿಕ್ಕೊಡಿ ಲೋಕಸಭಾ ಚುನಾವಣಾಧಿಕಾರಿಗಳ ಕಾರ್ಯಾಲಯದಿಂದ ಎಲ್ಲ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಚಿಕ್ಕೊಡಿ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1741758 ಮತದಾರರು ತಮ್ಮ ಹಕ್ಕನ್ನು ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯತ ಸಿ.ಇ.ಓ ಹಾಗೂ ಚಿಕ್ಕೊಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ಹೇಳಿದರು. ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟ ಮಾಡಿದ್ದು, ಮಾ.16 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ಒಟ್ಟು 2 ಹಂತದಲ್ಲಿ ಚುನಾವಣೆಯನ್ನು ಜರುಗಿಸಲು ಆಯೋಗವು ನಿರ್ಧರಿಸಿದ್ದು, 01-ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ 2ನೇ ಹಂತದಲ್ಲಿ ಚುನಾವಣೆ ನಡೆಸಲಾಗುತ್ತಿದೆ.
ಚಿಕ್ಕೊಡಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಲಿದೆ. ನಾಮಪತ್ರಗಳನ್ನು ಸಲ್ಲಿಸಲು ಏಪ್ರಿಲ್ 19 ಕೊನೆಯ ದಿನವಾಗಿದ್ದು, ಏಪ್ರಿಲ್.20ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಏಪ್ರಿಲ್.22 ಕೊನೆಯ ದಿನವಾಗಿದೆ. ಮೇ 7ರಂದು ಮತದಾನ ಹಾಗೂ ಜೂನ್ 4ರಂದು ಮತ ಎಣಿಕೆ ನಡೆಯಲಿದೆ ಎಂದರು.
ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ 1741758 ಮತದಾರರ ಪೈಕಿ 875953 ಪುರುಷ ಮತದಾರರು, 865731 ಮಹಿಳಾ ಮತದಾರರು, 74 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿರುತ್ತಾರೆ.ಮಾರ್ಚ 16 ರ ವರೆಗಿನ ಅಂಕಿ ಅಂಶಗಳ ಪ್ರಕಾರ 50589 ಯುವ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆಯ ಸಮರ್ಪಕ ಅನುಷ್ಠಾನಕ್ಕಾಗಿ ಚಿಕ್ಕೊಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 148 ಸೆಕ್ಟರ ಆಫಿಸರ, 27 ಫ್ಲೈಯಿಂಗ್ ಸ್ಕ್ವಾಡ್, 21 ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು ಹಾಗೂ 8 ಜನ ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಮಾ.16 ರಿಂದ ಜೂನ್ 06 ರವರೆಗೆ ಮಾದರಿ ನೀತಿ ಸಂಹಿತೆಯು ಜಾರಿಯಲ್ಲಿದ್ದು, ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವದು ಎಂದರು.
ಚಿಕ್ಕೊಡಿ ಲೋಕ ಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 32 ಚೆಕಪೋಸ್ಟ ಗಳನ್ನು ರಚಿಸಲಾಗಿದ್ದು ಈ ಪೈಕಿ 18 ರಾಜ್ಯದ ಗಡಿ ಭಾಗದಲ್ಲಿ, ಜಿಲ್ಲೆಯ ಗಡಿಯಲ್ಲಿ 2 ಹಾಗೂ 12 ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುತ್ತದೆ.
ಭಾರತ ಚುನಾವಣಾ ಆಯೋಗವು ವಿಕಲಚೇತನ ಮತದಾರರಿಗೆ ಮತ್ತು 85 ವರ್ಷ ಮೇಲ್ಪಟ್ಟ ವಯೋಮಾನ ಮತದಾರರು ಮತಚಲಾಯಿಸಲು ಅನುಕೂಲವಾಗುವಂತೆ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಿದೆ.
ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಚುನಾವಣಾ ಆಯೊಗದಿಂದ C-vigil App ಅನ್ನು ಪರಿಚಯಿಸಿದ್ದು, ಸಾರ್ವಜನಿಕರು ಅನಾಮಧೇಯವಾಗಿ ಅಥವಾ ತಮ್ಮ ವಿವರಗಳನ್ನು ಸಲ್ಲಿಸುವ ಮೂಲಕ ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಬಹುದು.
ರಾಜಕೀಯ ಸಭೆ ಸಮಾರಂಭ ನಡೆಸಲು ಪೂರ್ವಾನುಮತಿಗಾಗಿ ಸುವಿಧಾ ಯಾಪ ಮೂಲಕ ಪರವಾಣಿಗೆ ಪ್ರಚಾರ ಕಾರ್ಯಕ್ರಮಗಳಿಗೆ ಉಪಯೋಗಿಸುವ ವಾಹನಗಳಿಗೆ, ಪಕ್ಷದ ಕಛೇರಿ ತೆರೆಯಲು ಸೇರಿದಂತೆ ಎಲ್ಲಾ ಪರವಾನಗಿಗಳಿಗೆ 48 ಗಂಟೆ ಮುಂಚಿತವಾಗಿ ಸುವಿಧಾ ಯಾಪ ಮೂಲಕ ಪರವಾಣಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ಅನುಮತಿಗಳಿಗಾಗಿ ಏಕ ಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ರಾಜಕೀಯ ಪಕ್ಷಗಳು ಮತ್ತು ಸ್ಪರ್ಧಿಸುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ ಸಿ.ಇ.ಓ ಹಾಗೂ ಚಿಕ್ಕೊಡಿ ಲೋಕಸಭಾ ಮತಕ್ಷೇತ್ರದ ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ತಿಳಿಸಿದರು.
ಚುನಾವಣಾ ಸಹಾಯವಾಣಿ ಕೇಂದ್ರಗಳು: ಚಿಕ್ಕೋಡಿ ಲೋಕಸಭಾ ಚುನಾವಣಾಧಿಕಾರಿಗಳ ಕಚೇರಿ 08338-272132, 272130, ನಿಪ್ಪಾಣಿ_08348-220030, ಚಿಕ್ಕೊಡಿ ಸದಲಗಾ- 08338-272130, ಅಥಣಿ- 08289-468501, ಕಾಗವಾಡ- 08339-264555, ಕುಡಚಿ-9845986105, ರಾಯಬಾಗ- 8867519106, ಹುಕ್ಕೇರಿ- 08333-265036, ಯಮಕನಮರಡಿ-08333-200308, ಹಾಗೂ ಚುನಾವಣಾ ಸಹಾಯವಾಣಿ 1950 ಅನ್ನು ಸಂಪರ್ಕಿಸಬಹುದಾಗಿದೆ.
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾಣೆಗಳನ್ನು ಜರುಗಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಚುನಾವಣಾಧಿಕಾರಿಗಳಾದ ರಾಹುಲ ಶಿಂಧೆ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ ಉಪಕಾರ್ಯದರ್ಶಿ ಬಸವರಾಜ ಅಡವಿಮಠ, ಡಿ.ಎಸ್.ಪಿ ಗೌಡರ, ಚಿಕ್ಕೊಡಿ ತಹಶಿಲ್ದಾರ ಸಿ.ಎಸ್.ಕುಲಕರ್ಣಿ ಭಾಗವಹಿಸಿದ್ದರು.


