ಬೆಂಗಳೂರು: ಜಾಣಗೆರೆಯವರ ೭೫ರ ಸಂಭ್ರಮಕ್ಕೆ ಅರ್ಥ ತುಂಬಬೇಕಾದರೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಅಗತ್ಯ ಕನ್ನಡದ ಅಸ್ಮಿತೆ, ಕನ್ನಡಿಗರ ಸ್ವಾಭಿಮಾನ ಮತ್ತು ಕನ್ನಡಪರ ಹೋರಾಟದ ಧ್ವನಿಯಾಗಿ ಹಲವು ದಶಕಗಳಿಂದ ತಮ್ಮದೇ ಆದ ಛಾಪು ಮೂಡಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರ ೭೫ನೇ ವರ್ಷದ ಅಭಿನಂದನಾ ಸಮಾರಂಭವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಪಾರ ಅಭಿಮಾನಿಗಳು, ಕನ್ನಡಪರ ಹೋರಾಟಗಾರರು, ಸಾಹಿತಿಗಳು ಹಾಗೂ ವಿವಿದ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಆಗಸ್ಟ್ ೨೯ ರಂದು ನಡೆದಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಜಾಣಗೆರೆಯವರ ಅಭಿನಂದನಾ ಕಾರ್ಯಕ್ರಮ ನಡೆದಿರುವುದು ಅವರ ಸಾಹಿತ್ಯಿಕ ಮತ್ತು ಕನ್ನಡಪರ ಬದುಕಿಗೆ ದೊರೆಯುತ್ತಿರುವ ಸಾರ್ವಜನಿಕ ಮನ್ನಣೆಯ ಪ್ರತೀಕವಾಗಿದೆ.
ಜಾಣಗೆರೆ ವೆಂಕಟರಾಮಯ್ಯ ಅವರ ಬದುಕನ್ನು ಕೇವಲ ಒಬ್ಬ ಸಾಹಿತಿ ಅಥವಾ ಹೋರಾಟಗಾರರ ಬದುಕಾಗಿ ನೋಡಲು ಸಾಧ್ಯವಿಲ್ಲ. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡಿಗರ ಹಕ್ಕುಗಳು ಮತ್ತು ನಾಡಿನ ಅಸ್ಮಿತೆಯ ಪ್ರಶ್ನೆಗಳು ಎದುರಾದಾಗ ಜನರ ನಡುವೆ ನಿಂತು ಧ್ವನಿ ಎತ್ತಿದ ಹೋರಾಟದ ಪರಂಪರೆಯೊಂದಿಗೆ ಅವರ ಹೆಸರು ಬೆಸೆದುಕೊಂಡಿದೆ. ಸಾಹಿತ್ಯದ ಮೂಲಕವೂ, ಹೋರಾಟದ ಮೂಲಕವೂ ಕನ್ನಡದ ಪರವಾಗಿ ತಮ್ಮ ನಿಲುವನ್ನು ಪ್ರತಿಪಾದಿಸುತ್ತಾ ಬಂದಿರುವ ಅವರ ದೀರ್ಘಕಾಲದ ಸಾರ್ವಜನಿಕ ಬದುಕಿಗೆ ೭೫ರ ಸಂಭ್ರಮ ಒಂದು ಮಹತ್ವದ ಮೈಲಿಗಲ್ಲಾಗಿದೆ.
ಆದರೆ ಇಂತಹ ವ್ಯಕ್ತಿತ್ವಕ್ಕೆ ಕೇವಲ ಸನ್ಮಾನ, ಶಾಲು, ಹಾರ, ಫಲಕ ಮತ್ತು ಅಭಿನಂದನಾ ನುಡಿಗಳ ಮೂಲಕ ಗೌರವ ಸಲ್ಲಿಸಿದರೆ ಅದು ಪೂರ್ಣವಾಗುವುದಿಲ್ಲ ಎಂಬ ಅಭಿಪ್ರಾಯ ಕನ್ನಡಪರ ವಲಯದಲ್ಲಿ ವ್ಯಕ್ತವಾಗುತ್ತಿದೆ. ಕನ್ನಡಿಗರ ಅಸ್ಮಿತೆಗಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಅತ್ಯಂತ ಮಹತ್ವದ ಪ್ರಾತಿನಿಧಿಕ ಸಂಸ್ಥೆಯ ನೇತೃತ್ವವನ್ನು ಕನ್ನಡದ ನೆಲದ ಹೋರಾಟದಿಂದ ಬಂದಿರುವ ವ್ಯಕ್ತಿಗೆ ವಹಿಸುವ ಮೂಲಕ ಅವರ ಬದುಕಿನ ಬದ್ಧತೆಗೆ ಸಾರ್ಥಕ ಗೌರವ ನೀಡಿದಾಗ ಮಾತ್ರ 75ರ ಅಭಿನಂದನಾ ಸಮಾರಂಭಕ್ಕೆ ಮಹತ್ವದ ಸಾರ್ಥಕತೆ ಸಿಗುತ್ತದೆ!

