ರಾಮದುರ್ಗ ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25,000/- ರೂ.ಗಳ ದಂಡ ವಿಧಿಸಿದ ಮಾನ್ಯ ನ್ಯಾಯಾಲಯ.

WhatsApp Group Join Now

ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ತುರನೂರ ಗ್ರಾಮ ಹದ್ದಿಯಲ್ಲಿ ನಡೆದಿದ್ದ ಘೋರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಬೆಳಗಾವಿಯ ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ಆರೋಪಿಗೆ ಜೀವಾವಧಿ ಕಠಿಣ ಸಜೆ ಹಾಗೂ 25,000/- ರೂ.ಗಳ ದಂಡ ವಿಧಿಸಿ ಇಂದು ಮಹತ್ವದ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ:- ದಿನಾಂಕ: 22-06-2025 ರಂದು ರಾಮದುರ್ಗ ತಾಲೂಕಿನ ಚಿಂಚಖಂಡಿ ಗ್ರಾಮದ ನಿವಾಸಿ ಕೆಂಚಪ್ಪ ಹಣಮಂತ ವಜ್ರಮಟ್ಟಿ ಹಾಗೂ ಫಿರ್ಯಾದಿ ಶ್ರೀಮತಿ ದುಂಡವ್ವ ಕಲ್ಲೋಳೆಪ್ಪ ಮುದೇನಪ್ಪನವರ ಇವರ ಮಗನಾದ ಲಕ್ಷ್ಮಣ ಕಲ್ಲೋಳೆಪ್ಪ ಮುದೇನಪ್ಪನವರ (ಇಬ್ಬರೂ ಪರಸ್ಪರ ಸ್ನೇಹಿತರು) ಒಟ್ಟಿಗೆ ಸೇರಿ ರಾಮದುರ್ಗಕ್ಕೆ ಬಂದು. ತಿರುಮಲ ಹೋಟೆಲ್‌ನಲ್ಲಿ ಮದ್ಯ ಸೇವಿಸಿದ್ದರು. ತದನಂತರ ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ತುರನೂರ ಗ್ರಾಮದ ಸಮೀಪವಿರುವ ಮಾಯಪ್ಪ ಧರಿಗೊಂಡ ಇವರ ಜಮೀನಿಗೆ ಹೋಗಿ ಮಧ್ಯಾಹ್ನ 01:15 ಗಂಟೆಯ ಸುಮಾರಿಗೆ ಪಾರ್ಟಿ ಮಾಡುತ್ತಿದ್ದಾಗ. ಇಬ್ಬರ ನಡುವೆ ಹಣಕಾಸಿನ ವಿಷಯವಾಗಿ ಜಗಳ ನಡೆದಿದೆ. ಈ ವೇಳೆ ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿಯು ಲಕ್ಷ್ಮಣನಿಗೆ ಕೈಯಿಂದ ಬಡಿದು, ಕಾಲಿನಿಂದ ಒದ್ದು ಕೆಳಗೆ ಕೆಡವಿ. ಅವಾಚ್ಯವಾಗಿ ಬೈಯುತ್ತಾ “ರೋಕ್ಕ ಕೊಡದಿದ್ದರೆ ನಿನ್ನ ಮುಗಿಸುತ್ತೇನೆ” ಎಂದು ಹೆದರಿಸಿ. ಎರಡು ದೊಡ್ಡ ಕಲ್ಲುಗಳಿಂದ ಲಕ್ಷ್ಮಣನ ತಲೆ ಹಾಗೂ ಹಣೆಗೆ ಜಜ್ಜಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದನು.

ಈ ಘಟನೆಗೆ ಸಂಬಂಧಿಸಿದಂತೆ ರಾಮದುರ್ಗ ಪೊಲೀಸ್
ಠಾಣೆಯಲ್ಲಿ ಗುನ್ನೆ ನಂ: 82/2025. ಕಲಂ: 103(1) ಬಿ.ಎನ್.ಎಸ್. (BNS) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಶ್ರೀ ವಿನಾಯಕ ಬಡಿಗೇರ ಸಿಪಿಐ ರಾಮದುರ್ಗ ವೃತ್ತ ಹಾಗೂ ಶ್ರೀಮತಿ ಸವಿತಾ ಮುನ್ಯಾಳ ಪಿ.ಎಸ್.ಐ(ಕಾ.ಸು) ಇವರು ಪ್ರಕರಣದ ಸುದೀರ್ಘ ಹಾಗೂ ವ್ಯವಸ್ಥಿತ ತನಿಖೆ ನಡೆಸಿ. ಭದ್ರವಾದ ಸಾಕ್ಷ್ಯಾಧಾರಗಳೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿಯನ್ನು (Charge Sheet) ಸಲ್ಲಿಸಿದ್ದರು.

ನ್ಯಾಯಾಲಯದ ತೀರ್ಪು:- ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶ್ರೀ ಆರ್. ಎ. ಗಡಕರಿ ಅವರು ಮಾನ್ಯ ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸಿದ್ದರು. ಪ್ರಾಸಿಕ್ಯೂಷನ್ ಮಂಡಿಸಿದ ಸಾಕ್ಷ್ಯಗಳು ಹಾಗೂ ವಾದ-ವಿವಾದಗಳನ್ನು ಆಲಿಸಿದ ಬೆಳಗಾವಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಶ್ರೀ ಸುಭಾಷ ಸಂಕದ ಅವರು ಆರೋಪಿ ಕೆಂಚಪ್ಪ ಹಣಮಂತ ವಜ್ರಮಟ್ಟಿ ಸಾ: ಚಿಂಚಕಂಡಿ ಇವರ ಮೇಲಿನ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿ, ದಿನಾಂಕ: 02-07-2026 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ರೂ. 25,000/- ದಂಡ ವಿಧಿಸಿ ಆದೇಶಿಸಿದ್ದಾರೆ.

ಅಪರಾಧ ತನಿಖೆಯನ್ನು ಯಶಸ್ವಿಯಾಗಿ ನಡೆಸಿ, ಆರೋಪಿಗೆ ಶಿಕ್ಷೆಯಾಗುವಂತೆ ಮಾಡುವಲ್ಲಿ ಶ್ರಮಿಸಿದ ಶ್ರೀ ವಿನಾಯಕ ಬಡಿಗೇರ ಸಿಪಿಐ ರಾಮದುರ್ಗ ವೃತ್ತ ಹಾಗೂ ಶ್ರೀಮತಿ ಸವಿತಾ ಮುನ್ಯಾಳ ಪಿ.ಎಸ್.ಐ(ಕಾ.ಸು) ರಾಮದುರ್ಗ ಠಾಣೆ ಹಾಗೂ ರಾಮದುರ್ಗ ಪೊಲೀಸ್ ಠಾಣೆಯ ಸಿಬ್ಬಂದಿ ಜನರು ಹಾಗೂ ಸರ್ಕಾರಿ ಅಭಿಯೋಜಕರ ಕಾರ್ಯವನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಶ್ಲಾಘಿಸಿದ್ದಾರೆ.

About The Author